ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಏರ್ ಇಂಡಿಯಾ ಎಕ್ಸ್ಪ್ರೆಸ್ ಕ್ಯಾಬಿನ್ ಸಿಬ್ಬಂದಿಯ ಮುಷ್ಕರ ಅಂತ್ಯ; ಫ್ಲೈಟ್ ಸೇವೆ ಸಹಜ ಸ್ಥಿತಿಗೆ
ನವದೆಹಲಿ, ಮೇ 10: ಉದ್ಯೋಗಿಗಳಿಂದ ಪ್ರತಿಭಟನೆ ಎದುರಿಸುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆ ವಾರಾಂತ್ಯದೊಳಗೆ ಬಿಕ್ಕಟ್ಟು ಶಮನ ಮಾಡಿಕೊಂಡಿದೆ. ಕ್ಯಾಬಿನ್ ಸಿಬ್ಬಂದಿ ಮುಷ್ಕರ ಅಂತ್ಯಗೊಂಡಿದ್ದು ಇಂದು ಶುಕ್ರವಾರ ಸಂಸ್ಥೆಯ ಬಹುತೇಕ ವಿಮಾನಗಳು ಇನ್ನೆರಡು ದಿನದಲ್ಲಿ ಪೂರ್ಣಪ್ರಮಾಣದಲ್ಲಿ ಸಂಚಾರ ನಡೆಸಲಿವೆ. ಮೇ 7ರಂದು ನೂರಾರು ಉದ್ಯೋಗಿಗಳು ಹೇಳದೇ ಕೇಳದೇ ರಜೆ ಹಾಕಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. 170ಕ್ಕಿಂತ ಹೆಚ್ಚು ಫ್ಲೈಟ್ಗಳು ರದ್ದಾಗಿದ್ದವು. ನಿನ್ನೆ ಮೇ 9, ಗುರುವಾರ ಸಂಜೆ ಮುಷ್ಕರ ನಿರತ ಸಿಬ್ಬಂದಿ ತಮ್ಮ ಪ್ರತಿಭಟನೆ ನಿಲ್ಲಿಸಲು ನಿರ್ಧರಿಸಿದ್ದರು. ಅದರಂತೆ ಬಹುತೇಕ ಮಂದಿ ಇಂದು ಕೆಲಸಕ್ಕೆ ಮರಳಿದ್ದಾರೆ.
ಉದ್ಯೋಗಿಗಳು ಸಾಮೂಹಿಕವಾಗಿ ರಜೆ ಹಾಕಿದಾಗ ಕ್ಯಾಬಿನ್ ಸಿಬ್ಬಂದಿಯ ಸುಮಾರು 30 ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಈಗ ಪ್ರತಿಭಟನೆ ನಿಲ್ಲಿಸಿ ಕೆಲಸಕ್ಕೆ ಮರಳಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ನ ಮ್ಯಾನೇಜ್ಮೆಂಟ್ ಕೆಲಸದಿಂದ ತೆಗೆಯಲಾಗಿದ್ದ ಸಿಬ್ಬಂದಿಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದೆ. ಇನ್ನೆರಡು ದಿನದಲ್ಲಿ ಫ್ಲೈಟ್ ಸೇವೆ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ.
ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆ ದಿನಕ್ಕೆ 380 ಫ್ಲೈಟ್ಗಳ ಹಾರಾಟ ನಡೆಸುತ್ತದೆ. ಇದರಲ್ಲಿ ಸುಮಾರು 120 ಅಂತಾರಾಷ್ಟ್ರೀಯ ಫ್ಲೈಟ್ಗಳಿವೆ. ಭಾರತದೊಳಗೆ 260 ಫ್ಲೈಟ್ ಸೇವೆ ನೀಡುತ್ತದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ನ ಮ್ಯಾನೇಜ್ಮೆಂಟ್ ವಿರುದ್ಧ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು ಅಸಮಾಧಾನಗೊಂಡಿದ್ದಾರೆ. ಉದ್ಯೋಗಿ ಉದ್ಯೋಗಿಗಳ ಮಧ್ಯೆ ತಾರತಮ್ಯತೆ ಮಾಡಲಾಗುತ್ತಿದೆ. ಉದ್ಯೋಗಿಗಳನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಸಂಬಳ ವಿಚಾರದಲ್ಲಿ ಅನ್ಯಾಯ ಆಗುತ್ತಿದೆ. ಸಂದರ್ಶನದ ವೇಳೆ ತಿಳಿಸಿದ ಹುದ್ದೆಯೇ ಬೇರೆ, ಕೆಲಸಕ್ಕೆ ಸೇರಿದ ಮೇಲೆ ನೀಡಲಾದ ಹುದ್ದೆಯೇ ಬೇರೆ ಎನ್ನುವ ಅಳಲು ಹಲವರದ್ದು. ಈ ಹಿನ್ನೆಲೆಯಲ್ಲಿ ಮೇ 7ರಂದು ನೂರಾರು ಉದ್ಯೋಗಿಗಳು ಏಕಾಏಕಿ ಸಾಮೂಹಿಕವಾಗಿ ಹುಷಾರಿಲ್ಲವೆಂದು ಸಿಕ್ ಲೀವ್ ಹಾಕಿದ್ದರು. ಅಷ್ಟೇ ಅಲ್ಲ, ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಈ ಕಾರಣಕ್ಕೆ ಸಂಸ್ಥೆಯ ಹೆಚ್ಚಿನ ಫ್ಲೈಟ್ಗಳು ಎರಡು ದಿನ ಬಹುತೇಕ ಸ್ಥಗಿತಗೊಂಡಿದ್ದವು.