ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಸಿನಿಮಾ ಶೂಟಿಂಗ್ ಸೆಟ್ ಬೆಂಕಿಗಾಹುತಿ, ನಾಲ್ಕು ಕೋಟಿ ನಷ್ಟ
ತೆಲುಗು ಚಿತ್ರರಂಗದ ಜನಪ್ರಿಯ ನಟ ನಂದಮೂರಿ ಕಲ್ಯಾಣ್ ರಾಮ್ ನಟಿಸುತ್ತಿರುವ ಹೊಸ ಸಿನಿಮಾದ ಚಿತ್ರೀಕರಣ ನಡೆಸಲಾಗುತ್ತಿದ್ದ ಸೆಟ್ಗೆ ಬೆಂಕಿ ಬಿದ್ದಿದ್ದು ಸುಮಾರು ನಾಲ್ಕು ಕೋಟಿ ರೂಪಾಯಿ ನಷ್ಟವಾಗಿದೆ. ಆದರೆ ಈ ಬೆಂಕಿ ಅವಘಡದಲ್ಲಿ ಯಾರಿಗೂ ಯಾವುದೇ ಗಾಯ ಅಥವಾ ಜೀವಹಾನಿ ಸಂಭವಿಸಿಲ್ಲ ಎಂದು ಚಿತ್ರತಂಡ ತಿಳಿಸಿದೆ. ಶಾರ್ಟ್ ಸರ್ಕ್ಯೂಟ್ನಿಂದಾಗಿ ಈ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗುತ್ತಿದ್ದು, ಸೆಟ್ಗೆ ಬೆಂಕಿ ಬಿದ್ದಾಗ ಶೂಟಿಂಗ್ ನಡೆಯುತ್ತಿರಲಿಲ್ಲವಾದ್ದರಿಂದ ಯಾವುದೇ ಹಾನಿಯಾಗಿಲ್ಲ.
ನಂದಮೂರಿ ಕಲ್ಯಾಣ್ ರಾಮ್ ಅವರು ಕ್ರೈಂ ಥ್ರಿಲ್ಲರ್ ಕತೆಯುಳ್ಳ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಕಲ್ಯಾಣ್ ರಾಮ್ ಸಿಬಿಐ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಆಕ್ಷನ್ ದೃಶ್ಯಗಳ ಚಿತ್ರೀಕರಣ ಹಾಗೂ ಕೆಲವು ಕಚೇರಿ ದೃಶ್ಯಗಳ ಚಿತ್ರೀಕರಣವನ್ನು ಚಿತ್ರತಂಡ ಸೆಟ್ನಲ್ಲಿ ಮಾಡುತ್ತಿತ್ತು. ಇದಕ್ಕಾಗಿ ಹೈದರಾಬಾದ್ ಹೊರವಲಯದಲ್ಲಿ ಒಂದೇ ಜಾಗದಲ್ಲಿ ಬೇರೆ ಬೇರೆ ಸೆಟ್ಗಳನ್ನು ನಿರ್ಮಾಣ ಮಾಡಲಾಗಿತ್ತು. ಸೆಟ್ ನಿರ್ಮಾಣಕ್ಕೆ ಸುಮಾರು 4 ಕೋಟಿ ಖರ್ಚು ಮಾಡಲಾಗಿತ್ತು ಎನ್ನಲಾಗುತ್ತಿದೆ. ಈಗ ಆ ಬೃಹತ್ ಸೆಟ್ ಬೆಂಕಿಗೆ ಆಹುತಿಯಾಗಿದೆ. ಸೆಟ್ಗೆ ಬೆಂಕಿ ಬಿದ್ದಾಗ ಚಿತ್ರೀಕರಣ ನಡೆಯುತ್ತಿರಲಿಲ್ಲವಾದ್ದರಿಂದ ಯಾರಿಗೂ ಹಾನಿಯಾಗಿಲ್ಲ.
ಕಲ್ಯಾಣ್ ರಾಮ್ ನಟಿಸುತ್ತಿರುವ ಸಿನಿಮಾದಲ್ಲಿ ಹಿರಿಯ ನಟಿ, ರಾಜಕಾರಣಿ ವಿಜಯಶಾಂತಿ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಬಾಲಿವುಡ್ನ ಅರ್ಜುನ್ ರಾಮ್ಪಾಲ್, ನಾಯಕಿಯಾಗಿ ಸಾಯಿ ಮಂಜ್ರೇಕರ್ ನಟಿಸಿದ್ದಾರೆ. ಈ ಸಿನಿಮಾವನ್ನು ಪ್ರದೀಪ್ ಚಿಲಕೂರಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಅಶೋಕ್ ಬಂಡವಾಳ ಹೂಡಿದ್ದಾರೆ. ಕಲ್ಯಾಣ್ ರಾಮ್ ನಟನೆ ಜೊತೆಗೆ ಸಹ ನಿರ್ಮಾಪಕರೂ ಆಗಿದ್ದಾರೆ.
ಈ ಹಿಂದೆ ನಟ ಪವನ್ ಕಲ್ಯಾಣ್ ನಟಿಸಿರುವ ‘ಹರಿ ಹರ ವೀರ ಮಲ್ಲು’ ಸಿನಿಮಾದ ಸೆಟ್ಗೆ ಬೆಂಕಿ ತಗುಲಿತ್ತು. ಐತಿಹಾಸಿಕ ಸಿನಿಮಾ ಆದ್ದರಿಂದ ಬೃಹತ್ ಸೆಟ್ ಅನ್ನು ನಿರ್ಮಿಸಲಾಗಿತ್ತು. ಆ ಘಟನೆಯಲ್ಲಿಯೂ ಸಹ ಯಾರಿಗೂ ಯಾವುದೇ ಹಾನಿ ಆಗಿರಲಿಲ್ಲ. ಆ ಸಿನಿಮಾದ ಚಿತ್ರೀಕರಣ ಇನ್ನೂ ಚಾಲ್ತಿಯಲ್ಲಿದ್ದು, ಚುನಾವಣೆ ಬಳಿಕ ಸಿನಿಮಾವನ್ನು ಪೂರ್ಣಗೊಳಿಸಲಿದ್ದಾರೆ ಪವನ್. ಅದಕ್ಕೂ ಮುನ್ನ ನಟ ಪ್ರಭಾಸ್ ನಟಿಸುತ್ತಿದ್ದ ‘ಆದಿಪುರುಷ್’ ಸಿನಿಮಾ ಸೆಟ್ಗೆ ಬೆಂಕಿ ತಗುಲಿ ಪೂರ್ತಿ ಸೆಟ್ ಬೆಂಕಿಗಾಹುತಿಯಾಗಿತ್ತು. ಆದರೆ ಈ ಘಟನೆ ಮುಂಬೈನಲ್ಲಿ ನಡೆದಿತ್ತು.
ನಂದಮೂರಿ ಕಲ್ಯಾಣ್ ರಾಮ್, ಟಾಲಿವುಡ್ ಸ್ಟಾರ್ ನಟ ಜೂ ಎನ್ಟಿಆರ್ ಅವರ ಅಣ್ಣನಾಗಿದ್ದು, ಸಿನಿಮಾಗಳಲ್ಲಿ ನಟಿಸುವ ಜೊತೆಗೆ ನಿರ್ಮಾಣವನ್ನೂ ಮಾಡುತ್ತಾರೆ. ಪ್ರಸ್ತುತ ಜೂ ಎನ್ಟಿಆರ್ ನಟಿಸುತ್ತಿರುವ ‘ದೇವರ’ ಸಿನಿಮಾವನ್ನು ಇವರೇ ನಿರ್ಮಿಸುತ್ತಿದ್ದಾರೆ. ಈ ಹಿಂದೆ ತಮ್ಮದೇ ಸಿನಿಮಾಗಳನ್ನು ನಿರ್ಮಾಣ ಮಾಡುವ ಜೊತೆಗೆ ರವಿತೇಜ ನಟನೆಯ ‘ಕಿಕ್ 2’, ಜೂ ಎನ್ಟಿಆರ್ ನಟನೆಯ ‘ಜೈ ಲವ ಕುಶ’ ಸಿನಿಮಾಗಳನ್ನು ನಿರ್ಮಿಸಿದ್ದರು.