ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಮೋದಿ ಫೋಟೋ ಬಳಕೆಗೆ ಅವಕಾಶ ಸಿಕ್ಕಿದೆ, ದೂರು ನೀಡಿದವರಿಗೆ ಮುಖಭಂಗವಾಗಿದೆ: ಕೆಎಸ್ ಈಶ್ವರಪ್ಪ
ಶಿವಮೊಗ್ಗ: ಮೋದಿ ಫೋಟೊ ಬಳಕೆಗೆ ನನಗೆ ಅವಕಾಶ ಸಿಕ್ಕಿದ್ದು, ದೂರು ನೀಡಿದ್ದವರಿಗೆ ಮುಖಭಂಗವಾಗಿದೆ ಎಂದು ಕೆಎಸ್ ಈಶ್ವರಪ್ಪ ಅವರು ಗುರುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನರೇಂದ್ರ ಮೋದಿ ಫೋಟೋ ಬಳಸಬಾರದು ಎಂದು ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಆದರೆ, ಇದೀಗ ಮೋದಿ ಫೋಟೋ ಬಳಸಬೇಡಿ ಎಂದು ದೂರು ನೀಡಿದವರಿಗೆ ಮುಖಭಂಗವಾಗಿದೆ. ಮೋದಿಯವರ ಫೋಟೋ ಬಳಕೆಗೆ ನನಗೆ ಅಧಿಕಾರ ಸಿಕ್ಕಿದೆ. ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡುತ್ತೇನೆ. ಈ ಚುನಾವಣೆಯಲ್ಲಿ ಜೀವನ ಪೂರ್ತಿ ಅವರ ಫೋಟೋ ಬಳಸುತ್ತೇನೆ. ನರೇಂದ್ರ ಮೋದಿಯವರ ವಿಚಾರಧಾರೆಯನ್ನು ನಾನು ಎಲ್ಲರಿಗೂ ತಿಳಿಸುತ್ತೇನೆ ಎಂದು ಹೇಳಿದರು.
ಬಹಳ ಸಂತೋಷದ ವಿಷಯವೆಂದರೆ ವಿಶ್ವ ನಾಯಕ ನನ್ನ ಜೊತೆ ಉಳಿದಿರುವುದು. ನರೇಂದ್ರ ಮೋದಿ ನನ್ನ ಜೊತೆ ಉಳಿದರೆ ಅದೇ ನನಗೆ ಆನಂದ. ಈಶ್ವರಪ್ಪ ಮೋದಿ ಪೋಟೋ ಬಳಸುತ್ತಿದ್ದಾರೆಂದು ಬಿಜೆಪಿಯವರು ಕೋರ್ಟ್ಗೆ ಹೋಗಿದ್ದರು. ಚುನಾವಣಾ ಆಯೋಗ, ಕೋರ್ಟ್ ಅವರಿಗೆ ಸೊಪ್ಪು ಹಾಕಲಿಲ್ಲ. ಮೋದಿ ಅವರನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ಮೋದಿಯವರಿಗೆ ಅಪಮಾನ ಮಾಡಬಾರದು. ಗಣಪತಿ, ಈಶ್ವರನನ್ನು ಎಲ್ಲರೂ ಪೂಜೆ ಮಾಡುತ್ತಾರೆ. ನಿಮ್ಮ ಮನೆಯಲ್ಲಿ ಪೋಟೋ ಇಟ್ಟುಕೊಳ್ಳಬೇಡಿ ಅಂದರೆ ಹೇಗೆ? ಮೋದಿ ಅವರು ನನಗೆ ಮಾದರಿ ವ್ಯಕ್ತಿ, ಆದರ್ಶ ವ್ಯಕ್ತಿ. ನನ್ನ ಜೀವನಪೂರ್ತಿ ಮೋದಿ ಪೋಟೋ ಇಟ್ಟುಕೊಳ್ಳುತ್ತೇನೆ. ಯಾವುದೇ ಪಕ್ಷ ಅಥವಾ ವ್ಯಕ್ತಿ ನನ್ನನ್ನು ಮೋದಿಯವರಿಂದ ಬೇರ್ಪಡಿಸಲು ಸಾಧ್ಯವಿಲ್ಲ. ನರೇಂದ್ರ ಮೋದಿ ಪೋಟೋ ಬಳಸಲು ಹಿಂದೂ ಸಮಾಜಕ್ಕೆ ಅವಕಾಶ ಇದೆ. ನಾನು ಚುನಾವಣೆಗೆ ಪೂರ್ಣ ಪ್ರಮಾಣದಲ್ಲಿ ಮೋದಿ ಪೋಟೋ ಬಳಸುತ್ತೇನೆಂದು ತಿಳಿಸಿದರು.
ಶಿರಾಳಕೊಪ್ಪದಲ್ಲಿ ದೊಡ್ಡ ಸಾರ್ವಜನಿಕ ಸಭೆ ಇಟ್ಟುಕೊಂಡಿದ್ದರು. ಅಲ್ಲಿ ಕೆಲವು ಗೂಂಡಾಗಳು ಸಭೆ ಮಾಡದಂತೆ ಬೆದರಿಕೆ ಹಾಕಿದರು. ಮೈಕ್, ಚೇರ್ ತೆಗೆದುಕೊಂಡು ಹೋಗಬೇಕು ಎಂದು ಒತ್ತಾಯಿಸಿದರು. 40 ವರ್ಷದ ರಾಜಕಾರಣ ಜೀವನದಲ್ಲಿ ನನಗೆ ಯಾರೂ ಸಹ ಈ ರೀತಿ ಮಾಡಿರಲಿಲ್ಲ. ಸೋಲುತ್ತೇವೆ ಎನ್ನುವ ಭಯದಿಂದ ಯಡಿಯೂರಪ್ಪ ಹಾಗೂ ಅವರ ಮಕ್ಕಳು ಈ ರೀತಿ ಮಾಡಿದ್ದಾರೆ. ಮುಂದೆ ಈ ರೀತಿ ಮಾಡಿದರೆ ನಾನು ಬೇರೆ ರೀತಿಯಲ್ಲೇ ಉತ್ತರ ಕೊಡುತ್ತೇನೆಂದು ಇದೇ ವೇಳೆ ಎಚ್ಚರಿಕೆ ನೀಡಿದರು.
ಜೊತೆಗೆ ಎಲ್ಲಾ ಪಕ್ಷ ಹಾಗೂ ಜಾತಿಯ ಜನ ನನ್ನ ಜೊತೆಗೆ ಇದ್ದಾರೆ. ನೂರಕ್ಕೆ ನೂರರಷ್ಟು ನಾನು ಈ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿಕಾರಿಪುರದ ಚುನಾವಣಾ ಕಚೇರಿ ಎದುರು ವಾಮಾಚಾರ ಮಾಡಿದ್ದಾರೆ. ವಾಮಾಚಾರದಿಂದ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ದೇವರು, ಧರ್ಮ ನನ್ನ ಜೊತೆ ಇರುತ್ತದೆ. ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕಿ ತೊಂದರೆ ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಈ ಚುನಾವಣೆ ಮುಗಿದ ಮೇಲೆ ಈ ಸರಕಾರ ಇರಲ್ಲ. ಹಿಂದೂ ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ಚುನಾವಣೆ ಮರೆತು ಹೋರಾಟ ಮಾಡುತ್ತೇನೆಂದು ಎಚ್ಚರಿಸಿದರು.
ಶಿವಮೊಗ್ಗಕ್ಕೆ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಬರುತ್ತಿದ್ದಾರೆ. ಆದರೂ ಕಾರ್ಯಕರ್ತರಲ್ಲಿ ಉತ್ಸಾಹ ಇಲ್ಲ. ರಾಹುಲ್ ಗಾಂಧಿ ಎಲ್ಲೆಲ್ಲಿ ಹೋಗುತ್ತಾರೋ ಅಲ್ಲೆಲ್ಲ ಕಾಂಗ್ರೆಸ್ ಸೋಲುತ್ತಿದೆ. ಹೀಗಾಗಿ ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ಬರಬೇಕು ಎಂದು ವ್ಯಂಗ್ಯವಾಡಿದರು.