``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಭೀಕರ ಅಪಘಾತ: ನಟ ಪಂಕಜ್​ ತ್ರಿಪಾಠಿ ಬಾವ ನಿಧನ; ಸಹೋದರಿ ಸ್ಥಿತಿ ಗಂಭೀರ

ನಟ ಪಂಕಜ್​ ತ್ರಿಪಾಠಿ  ಅವರ ತಂದೆ ಕೆಲವೇ ತಿಂಗಳ ಹಿಂದೆ ನಿಧನರಾಗಿದ್ದರು. ಈಗ ಅವರ ಕುಟುಂಬದಲ್ಲಿ ಇನ್ನೊಂದು ದುರಂತ ಸಂಭವಿಸಿದೆ. ಭೀಕರ ಕಾರು ಅಪಘಾತದಲ್ಲಿ ಪಂಕಜ್​ ತ್ರಿಪಾಠಿ ಅವರ ಬಾವ ಕೊನೆಯುಸಿರು ಎಳೆದಿದ್ದಾರೆ. ಪಂಕಜ್​ ತ್ರಿಪಾಠಿ ಅವರ ಸಹೋದರಿಗೆ  ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರ ಸ್ಥಿತಿ ಚಿಂತಾಜನಕವಾಗಿ ಎಂದು ಹೇಳಲಾಗಿದೆ. ಶನಿವಾರ (ಏಪ್ರಿಲ್​ 20) ಸಂಜೆ ನಾಲ್ಕು ಗಂಟೆಗೆ ಜಾರ್ಖಂಡ್​ನಲ್ಲಿ ಈ ಅಪಘಾತ ಸಂಭವಿಸಿದೆ. ಪಂಕಜ್​ ತ್ರಿಪಾಠಿ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ಆ ದೇವರ ನೀಡಲಿ ಎಂದು ಅಭಿಮಾನಿಗಳು, ಆಪ್ತರು ಪ್ರಾರ್ಥಿಸುತ್ತಿದ್ದಾರೆ.

ಪಂಕಜ್​​ ತ್ರಿಪಾಠಿ ಅವರ ಸಹೋದರಿ ಸರಿತಾ ತಿವಾರಿ ಹಾಗೂ ಅವರ ಪತಿ ರಾಜೇಶ್​ ತಿವಾರಿ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಅತಿ ವೇಗದಲ್ಲಿ ಇದ್ದಿದ್ದರಿಂದ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ. ಅಪಘಾತದ ತೀವ್ರತೆಗೆ ರಾಜೇಶ್​ ತಿವಾರಿ ನಿಧನರಾಗಿದ್ದಾರೆ. ಕಾರಿನ ಒಳಗಿದ್ದ ರಾಜೇಶ್​ ಮತ್ತು ಸರಿತಾ ಅವರನ್ನು ಸ್ಥಳೀಯರ ಸಹಾಯದಿಂದ ಪೊಲೀಸರು ಹೊರತೆಗೆದಿದ್ದಾರೆ.

ಅಪಘಾತದ ಬಳಿಕ ಧನ್​ಬಾದ್​ ಮೆಡಿಕಲ್​ ಕಾಲೇಜ್ ಆಸ್ಪತ್ರೆಗೆ ರಾಜೇಶ್​ ತಿವಾರಿ ಹಾಗೂ ಸರಿತಾ ತಿವಾರಿ ಅವರನ್ನು ದಾಖಲಿಸಲಾಯಿತು. ಅಷ್ಟು ಹೊತ್ತಿಗಾಗಲೇ ರಾಜೇಶ್​ ತಿವಾರಿ ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದರು. ಸರಿತಾ ತಿವಾರಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿ ಸ್ಥಿತಿ ಸದ್ಯಕ್ಕಂತೂ ಚಿಂತಾಜನಕವಾಗಿದೆ ಎಂದು ವರದಿ ಆಗಿದೆ. ಈ ಘಟನೆಯಿಂದ ಪಂಕಜ್​ ತ್ರಿಪಾಠಿ ಅವರ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ.

ಪಂಕಜ್​ ತ್ರಿಪಾಠಿ ಅವರ ಬಾವ ರಾಜೇಶ್​ ತಿವಾರಿ ಅವರು ಭಾರತೀಯ ರೇಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಚಿತ್ತರಂಜನ್​ನಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ತಮ್ಮ ಹಳ್ಳಿಯಿಂದ ಚಿತ್ತರಂಜನ್​ಗೆ ವಾಪಸ್​ ಬರುವ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. 2023ರ ಆಗಸ್ಟ್​ ತಿಂಗಳಲ್ಲಿ ಪಂಕಜ್​ ತ್ರಿಪಾಠಿ ಅವರ ತಂದೆ ನಿಧನರಾಗಿದ್ದರು. ಆ ನೋವು ಮರೆಯುವ ಮುನ್ನವೇ ಅವರ ಕುಟುಂಬದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸರಿತಾ ತಿವಾರಿ ಬೇಗ ಚೇತರಿಸಿಕೊಳ್ಳಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

No Comments

Leave A Comment