``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ಮಂಡ್ಯ ಬಿಟ್ಟು ಯಾವತ್ತಿಗೂ ಹೋಗಲ್ಲ, ಬಿಜೆಪಿಗೆ ನನ್ನ ಬೆಂಬಲ: ಸುಮಲತಾ ಅಂಬರೀಷ್
ಮಂಡ್ಯ: ಸಕ್ಕರೆ ನಾಡು ಮಂಡ್ಯ ಬಿಟ್ಟು ಬೇರೆ ಕಡೆ ನನ್ನ ರಾಜಕೀಯ ಜೀವನವಿಲ್ಲ, ಮಂಡ್ಯ ಮಣ್ಣಿನ ಸೊಸೆಯಾಗಿ ಜಿಲ್ಲೆಯ ಜನರ ಕೈಬಿಡಲು ನಾನು ಇಷ್ಟಪಡುವುದಿಲ್ಲ. ಈ ಮಂಡ್ಯದ ಋಣ ಮತ್ತು ಈ ಮಂಡ್ಯದ ಜನವನ್ನು ನಾನು ಎಂದೆಂದಿಗೂ ಬಿಡುವುದಿಲ್ಲ ಎಂದು ಪ್ರಮಾಣ ಮಾಡಿ ಹೇಳುತ್ತೇನೆ ಎಂದು ಸಂಸದೆ ಸುಮಲತಾ ಪುನರುಚ್ಛರಿಸಿದ್ದಾರೆ.
ಮಂಡ್ಯದಲ್ಲಿಂದು ಬೆಂಬಲಿಗರ ಬಹಿರಂಗ ಸಮಾವೇಶದಲ್ಲಿ ಭಾವಪರವಶರಾಗಿ ಮಾತನಾಡಿದ ಅವರು, ಮಂಡ್ಯದ ಜಿಲ್ಲೆಯ ಜನ ನನಗೆ ತಾಯಿ ಸ್ಥಾನ ನೀಡಿದ್ದೀರಿ, ಈ ತಾಯಿಯನ್ನು ಮಕ್ಕಳಿಂದ ದೂರ ಮಾಡಲು ಎಂದಿಗೂ ಸಾಧ್ಯವಿಲ್ಲ.
ಮಂಡ್ಯದಲ್ಲಿ ಸ್ಪರ್ಧಿಸುವುದಿಲ್ಲ: ಹಠಕ್ಕೆ ಬಿದ್ದು ನಾನು ಪಕ್ಷೇತರಳಾಗಿ ಸ್ಪರ್ಧೆ ಮಾಡುವುದಿಲ್ಲ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ನನ್ನ ಬೆಂಬಲ ನೀಡುತ್ತೇನೆ. ಕಾಂಗ್ರೆಸ್ ಪಕ್ಷ ಸೇರುವುದಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ದೇಶಪರ ಕಾಳಜಿ, ಕೆಲಸಗಳನ್ನು ಮೆಚ್ಚಿ ಬಿಜೆಪಿಗೆ ಬೆಂಬಲ ನೀಡುತ್ತೇನೆ. ರಾಷ್ಟ್ರ ಮಟ್ಟದ ಪಕ್ಷವೊಂದು ನನ್ನ ಬೆಂಬಲಕ್ಕೆ ಇದ್ದಾಗ ಮುಂದಿನ ದಿನಗಳಲ್ಲಿ ನಾನು ಯಾವ ರೀತಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇನೆಂದು ನೀವೆಲ್ಲಾ ನೋಡುತ್ತೀರ ಎಂದರು.
ನಾನು ಆಕಸ್ಮಿಕವಾಗಿ ರಾಜಕೀಯ ಪ್ರವೇಶ ಮಾಡಿದೆ. ಐದು ವರ್ಷಗಳ ಹಿಂದೆ ನನಗೆ ಐತಿಹಾಸಿಕ ಗೆಲುವು ನೀಡಿದ್ರಿ. ನನಗೆ ಐತಿಹಾಸಿಕ ಗೆಲುವು ಕೊಡುಗೆಯಾಗಿ ಕೊಟ್ಟಿದ್ದೀರಿ. ಐದು ವರ್ಷಗಳಲ್ಲಿ ನನ್ನ ಜೊತೆಗಿದ್ದ ಎಲ್ಲರಿಗೂ ವಂದನೆಗಳು. ಜನಸಾಮಾನ್ಯರ ಸಮಸ್ಯೆಗಳ ಪರ ನಾನು ನಿಂತಿದ್ದೇನೆ. ಜಿಲ್ಲೆ ಅಭಿವೃದ್ಧಿ ಮಾಡುವುದಷ್ಟೇ ನನ್ನ ಮನಸ್ಸಿನಲ್ಲಿದ್ದಿದ್ದು. ಕೆಆರ್ಎಸ್ ಡ್ಯಾಂ ಸಂರಕ್ಷಣೆ, ಅಕ್ರಮ ಗಣಿಗಾರಿಕೆ ವಿರುದ್ಧ ಯುದ್ಧವನ್ನೇ ಮಾಡಿದ್ದೇನೆ. ಮೈಷುಗರ್ ಕಾರ್ಖಾನೆಗಾಗಿ ಎರಡು ವರ್ಷ ಹೋರಾಡಿದ್ದೇನೆ ಎಂದು ತಿಳಿಸಿದರು.
2019ರಲ್ಲಿ ಅದೊಂದು ಬೇರೆ ತರಹದ ಸವಾಲಾಗಿತ್ತು. ಈಗ ಬದಲಾದ ಪರಿಸ್ಥಿತಿಯಲ್ಲಿ ಮತ್ತೊಂದು ಸವಾಲು ಎದುರಿಸುತ್ತಿದ್ದೇನೆ. ಕೊನೆಗಳಿಗೆವರೆಗೂ ಬಿಜೆಪಿ ಟಿಕೆಟ್ ಉಳಿಸಿಕೊಳ್ಳಲು ಹೋರಾಟ ಮಾಡಿದೆ. ಬೆಂಗಳೂರು ಉತ್ತರ, ಮೈಸೂರು, ಚಿಕ್ಕಬಳ್ಳಾಪುರದಲ್ಲಿ ನಿಲ್ಲುವಂತೆ ಹೇಳಿದರು. ನನಗೆ ಬೇರೆ ಬೇರೆ ಕ್ಷೇತ್ರದ ಆಫರ್ ನೀಡಿದರು. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗುವುದಿಲ್ಲ. ಗೆದ್ದರು, ಸೋತರು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ ಎಂದರು.