ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ಜಲ್ವಾರ್: ಐವರ ಮೇಲೆ ಡಂಪರ್ ಟ್ರಕ್ ಹರಿಸಿ ಭೀಕರ ಹತ್ಯೆ!
ಜಲ್ವಾರ್ : ಪೊಲೀಸ್ ಠಾಣೆಗೆ ದೂರು ನೀಡಲು ಹೊರಟ್ಟಿದ್ದ ಐವರನ್ನು ಡಂಪರ್ ಟ್ರಕ್ ಹರಿಸಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಜಲ್ವಾರ್ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಮೃತರ ಪೈಕಿ ಇಬ್ಬರು ಸಹೋದರರು ಸೇರಿದ್ದಾರೆ. ಘಟನೆಯ ಬಳಿಕ ಆರೋಪಿಗಳು ಡಂಪರ್ ಅಲ್ಲಿಯೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
ತಡರಾತ್ರಿ ಯಾವುದೋ ವಿಚಾರಕ್ಕೆ ಎರಡು ಗುಂಪಿಗಳ ನಡುವೆ ಜಗಳ ನಡೆದಿದೆ. ವಿವಾದಕ್ಕೆ ಕಾರಣ ತಿಳಿದುಬಂದಿಲ್ಲ, ಇಬ್ಬರು ಸಹೋದರರು ಸೇರಿದಂತೆ ಐವರು ಪೋಲಿಸ್ ಠಾಣೆಗೆ ದೂರು ದಾಖಲಿಸುವುದಾಗಿ ಎರಡು ಮೋಟಾರು ಸೈಕಲ್ ನಲ್ಲಿ ಹೊರಟ್ಟಿದ್ದರು. ಇವರನ್ನು ತಡೆದ ಆರೋಪಿಗಳು ಡಂಪರ್ ಟ್ರಕ್ ನ್ನು ಮೋಟಾರ್ ಸೈಕಲ್ ಮೇಲೆ ಹರಿಸಿ, ಸ್ಥಳದಲ್ಲಿಯೇ ನಾಲ್ವರನ್ನು ಹತ್ಯೆ ಮಾಡಿದ್ದಾರೆ.ಗಾಯಗೊಂಡಿದ್ದ ಮತ್ತೋರ್ವ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮೃತಪಟ್ಟಿದ್ದಾನೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಪಗಾರಿಯಾ ಠಾಣಾಧಿಕಾರಿ ವಿಜಯೇಂದ್ರ ಸಿಂಗ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ವಿವಾದದ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ,ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ ಎಂದು ಸರ್ಕಲ್ ಆಫೀಸರ್ ಪ್ರೇಮ್ ಕುಮಾರ್ ತಿಳಿಸಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಎಸ್‌ಎಚ್‌ಒ ವಿಜೇಂದ್ರ ಸಿಂಗ್ ಹೇಳಿದ್ದಾರೆ. ಮೃತಪಟ್ಟವರು ದಿನಗೂಲಿ ಕಾರ್ಮಿಕರಾಗಿದ್ದು, ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.