ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ಕರ್ನಾಟಕಕ್ಕೆ 2 ವಂದೇ ಭಾರತ್ ರೈಲು ಸೇರಿ 8 ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ: ಅವು ಯಾವುವು, ಎಲ್ಲಿಗೆ ಸಂಪರ್ಕ?
ಅಯೋಧ್ಯೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಶನಿವಾರ ಒಂದೇ ದಿನ ಮರುಅಭಿವೃದ್ಧಿಗೊಂಡ ಅಯೋಧ್ಯೆ ರೈಲು ನಿಲ್ದಾಣವನ್ನು ಉದ್ಘಾಟಿಸುವುದರೊಂದಿಗೆ ಎರಡು ಅಮೃತ ಭಾರತ್ ಮತ್ತು 6 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಅವುಗಳಲ್ಲಿ ಕೆಲವು ವರ್ಚುವಲ್ ಮೂಲಕ ಉದ್ಘಾಟನೆಗೊಂಡಿವೆ.
ನಂತರ ವಿಮಾನ ನಿಲ್ದಾಣವನ್ನು ಉದ್ಘಾಟಿಸಿ ಉತ್ತರ ಪ್ರದೇಶದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ರೈಲು ನಿಲ್ದಾಣವನ್ನು ಉದ್ಘಾಟಿಸಿದ ನಂತರ ಪ್ರಧಾನಿಯವರು ಸೌಲಭ್ಯದ ವೀಕ್ಷಣೆ ನಡೆಸಿದರು. ಅವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮತ್ತಿತರರು ಸಾಥ್ ನೀಡಿ ಮಾಹಿತಿ ನೀಡಿದರು.
ಮರುಅಭಿವೃದ್ಧಿಗೊಂಡ ನಿಲ್ದಾಣದ ಹಂತ-1 — ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣ — 240 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಪೂರ್ಣಗೊಂಡಿದೆ.ಮೂರು ಅಂತಸ್ತಿನ ರೈಲು ನಿಲ್ದಾಣದ ಕಟ್ಟಡವು ಲಿಫ್ಟ್‌ಗಳು, ಎಸ್ಕಲೇಟರ್‌ಗಳು, ಫುಡ್ ಪ್ಲಾಜಾಗಳು, ಪೂಜೆ ಸಮಾನುಗಳ ಅಂಗಡಿಗಳು, ಕ್ಲೋಕ್ ರೂಮ್‌ಗಳು, ಮಕ್ಕಳ ಆರೈಕೆ ಕೊಠಡಿಗಳು, ವೈಟಿಂಗ್ ರೂಂಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಅಮೃತ್ ಭಾರತ್ ರೈಲು: ಪ್ರಧಾನಮಂತ್ರಿಯವರು ಎರಡು ಹೊಸ ಅಮೃತ್ ಭಾರತ್ ರೈಲುಗಳಾದ ದರ್ಬಾಂಗ್ -ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮತ್ತು ಮಾಲ್ಡಾ ಟೌನ್-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಸ್ (ಬೆಂಗಳೂರು) ಅಮೃತ್ ಭಾರತ್ ಎಕ್ಸ್‌ಪ್ರೆಸ್‌ಗೆ ಈ ಸಂದರ್ಭದಲ್ಲಿ ಚಾಲನೆ ನೀಡಿದರು.
ಆರು ಹೊಸ ವಂದೇ ಭಾರತ್ ರೈಲುಗಳು: ಆರು ಹೊಸ ವಂದೇ ಭಾರತ್ ರೈಲುಗಳಿಗೆ ಸಹ ಪ್ರಧಾನ ಮಂತ್ರಿಯವರು ಚಾಲನೆ ನೀಡಿದರು. ಶ್ರೀ ಮಾತಾ ವೈಷ್ಣೋದೇವಿ ಕತ್ರಾ-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್, ಅಮೃತಸರ-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್, ಕೊಯಮತ್ತೂರು-ಬೆಂಗಳೂರು ಕ್ಯಾಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್, ಮಂಗಳೂರು-ಮಡ್ಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್, ಜಲ್ನಾ-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸೇರಿವೆ.
ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲು: ಕರಾವಳಿ ಜಿಲ್ಲೆಯ ಬಹುದಿನದ ಬೇಡಿಕೆಯಾದ ಮಹಾನಗರಗಳನ್ನು ಜೋಡಿಸುವ ಸೆಮಿ ಹೈ ಸ್ಪೀಡ್ ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ಮಂಗಳೂರು-ಮಡಂಗಾವ್ ಸೇರಿ 6 ವಂದೇ ಭಾರತ್, 2 ಅಮೃತ್ ಭಾರತ್ ರೈಲಿಗೆ ಏಕಕಾಲದಲ್ಲಿ ಚಾಲನೆ ನೀಡಲಾಯಿತು.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಆಯೋಜಿಸಲಾದ ಉದ್ಘಾಟನಾ ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಮಾತನಾಡಿ , ದೇಶದಲ್ಲಿ ಸ್ವಾತಂತ್ರ್ಯ ಬಳಿಕ ಎರಡು ಯುಗಗಳು ಕಾಣುತ್ತಿದ್ದು, 2014 ರ ಬಳಿಕ ಪರಿವರ್ತನೆ ಯುಗ ಆರಂಭವಾಗಿದೆ. ರೈಲ್ವೆ ಇಲಾಖೆಯಲ್ಲಿ ಮಹತ್ತರ ಬದಲಾವಣೆಯಾಗಿದೆ ಎಂದರು. ಬೆಂಗಳೂರು ಹಾಗೂ ಕೊಯಮತ್ತೂರು ನಡುವೆ ಒಂದು ವಂದೇ ಭಾರತ್ ರೈಲು ಸಂಚಾರವನ್ನು ಆರಂಭಿಸಿದರೆ, ಮತ್ತೊಂದು ಭಾಗ ಕರ್ನಾಟಕದ ಕರಾವಳಿ ಭಾಗವನ್ನು ಸಂಪರ್ಕಿಸಲಿದೆ.
ಬೆಂಗಳೂರಿನಿಂದ ಕೊಯಮತ್ತೂರಿಗೆ ವಂದೇ ಭಾರತ್ ರೈಲು: ಬೆಂಗಳೂರಿಗೆ ತಮಿಳುನಾಡಿನ ಹೊಸೂರು, ಸೇಲಂ, ಧರ್ಮಪುರಿ. ಕೊಯಮತ್ತೂರು ಭಾಗದವರಿಗೆ ನಿಕಟ ಸಂಪರ್ಕವಿದೆ. ಅದು ವಹಿವಾಟು, ಶಿಕ್ಷಣ, ಆಸ್ಪತ್ರೆ.. ಹೀಗೆ ನಾನಾ ಕಾರಣಗಳಿಗೆ ಜನ ಬೆಂಗಳೂರಿಗೆ ಬಂದು ಹೋಗುತ್ತಾರೆ. ಅವರ ಸಂಚಾರಕ್ಕೆ ಸಾಕಷ್ಟು ಬಸ್ ಹಾಗೂ ರೈಲು ಸೇವೆ ಇವೆ. ಆದರೂ ವಂದೇ ಭಾರತ್ ರೈಲು ಬೆಂಗಳೂರು ಹಾಗೂ ಕೊಯಮತ್ತೂರು ನಡುವೆ ಬೇಕು ಎನ್ನುವ ಬೇಡಿಕೆಯಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕೊಯಮತ್ತೂರಿಗೆ ಹೋಗಿ ಅದೇ ದಿನ ವಾಪಾಸ್ ಬರುವಂತೆ ವಂದೇ ಭಾರತ್ ರೈಲು ಸೇವೆಗೆ ಸಹ ಚಾಲನೆ ಸಿಕ್ಕಿದೆ.