ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಚರ್ಮಗಂಟು ರೋಗದಿಂದ ಜಾನುವಾರುಗಳ ಸಾವು: ಕೇಂದ್ರ ಸರಕಾರದ ಅಂಕಿಅಂಶಗಳ ಬಗ್ಗೆ ಸದನ ಸಮಿತಿ ಶಂಕೆ

ಹೊಸದಿಲ್ಲಿ: 2022 ಮತ್ತು 2023ರಲ್ಲಿ ಎರಡು ಲಕ್ಷಕ್ಕೂ ಅಧಿಕ ಜಾನುವಾರುಗಳು ಮತ್ತು ಎಮ್ಮೆಗಳು ಚರ್ಮಗಂಟು ರೋಗ (ಎಲ್‌ಎಸ್‌ಡಿ)ದಿಂದ ಸಾವನ್ನಪ್ಪಿವೆ ಎಂಬ ಕೇಂದ್ರ ಪಶು ಸಂಗೋಪನಾ ಸಚಿವಾಲಯದ ಅಂಕಿಅಂಶಗಳನ್ನು ಬಿಜೆಪಿ ಸಂಸದ ಪಿ.ಸಿ.ಗದ್ದಿಗೌಡರ್ ನೇತೃತ್ವದ ಕೃಷಿ,ಪಶು ಸಂಗೋಪನೆ ಮತ್ತು ಆಹಾರ ಸಂಸ್ಕರಣೆ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಪ್ರಶ್ನಿಸಿದೆ. ಪೀಡಿತ ಮತ್ತು ಮೃತ ಜಾನುವಾರಗಳ ಸಂಖ್ಯೆ ಮತ್ತು ತಳಮಟ್ಟದ ವಾಸ್ತವಗಳ ನಡುವೆ ಅಂತರವಿದೆ ಎಂದು ಸಮಿತಿಯು ಹೇಳಿದೆ ಎಂದು thehindu.com ವರದಿ ಮಾಡಿದೆ.

ಸಚಿವಾಲಯವು ಇದನ್ನು ಅಲ್ಲಗಳೆದಿದ್ದರೂ ಸಮಿತಿಯು, ನಿಖರವಾದ ದತ್ತಾಂಶಗಳು ಪರಿಸ್ಥಿತಿಯ ಗಂಭೀರತೆಯನ್ನು ತಿಳಿದುಕೊಳ್ಳಲು ಮತ್ತು ರೋಗವನ್ನು ನಿಯಂತ್ರಿಸಲು ನೆರವಾಗುತ್ತಿದ್ದವು ಎಂದು ಹೇಳಿದೆ. ಸೋಂಕು ಮತ್ತು ಸಾವುಗಳ ಪ್ರಕರಣಗಳು ವರದಿಯಾಗದೆ ಉಳಿಯಕೂಡದು ಮತ್ತು ವರದಿಯು ನಿಖರವಾಗಿರಬೇಕು, ಇದಕ್ಕಾಗಿ ಎಲ್‌ಎಸ್‌ಡಿ ಸೋಂಕು ಹರಡುವಿಕೆ ಮತ್ತು ಜಾನುವಾರುಗಳ ಸಾವುಗಳ ದತ್ತಾಂಶಗಳ ಸೂಕ್ತ ಸಂಕಲನವನ್ನು ಖಚಿತಪಡಿಸಿಕೊಳ್ಳುವಂತೆ ಸಮಿತಿಯು ಕೇಂದ್ರಕ್ಕೆ ಶಿಫಾರಸು ಮಾಡಿದೆ. ಜಾನುವಾರುಗಳ ಸಾವುಗಳಿಂದ ರೈತರು ಮತ್ತು ಜಾನುವಾರುಗಳ ಮಾಲಕರು ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಕ್ಕೊಳಗಾಗಿದ್ದರೆ ಎಂದು ಸಮಿತಿಯು ಹೇಳಿದೆ. ರೋಗದ ಹರಡುವಿಕೆಯಿಂದ ಜಾನುವಾರುಗಳ ಸಾವಿಗೆ ಪರಿಹಾರ ನೀಡಲು ಕೇಂದ್ರವು ಯಾವುದೇ ಯೋಜನೆಯನ್ನು ಹೊಂದಿಲ್ಲ ಎನ್ನುವುದನ್ನು ಗಮನಿಸಿರುವ ಸಮಿತಿಯು ಜಾನುವಾರುಗಳ ಮಾಲಿಕರಿಗೆ ಪರಿಹಾರವನ್ನು ಒದಗಿಸಿರುವ ಮಹಾರಾಷ್ಟ್ರ ಮತ್ತು ಕರ್ನಾಟಕ ಸರಕಾರಗಳ ಉದಾಹರಣೆಗಳನ್ನು ನೀಡಿದೆ.

ರೈತರಿಗೆ ಪರಿಹಾರವನ್ನು ಒದಗಿಸಲು ಅಗತ್ಯ ಕ್ರಮಗಳನ್ನು ತೆಗೆದು ಕೊಳ್ಳುವಂತೆ ಅದು ಕೇಂದ್ರಕ್ಕೆ ಸೂಚಿಸಿದೆ.ಎಲ್‌ಎಸ್‌ಡಿ 23 ರಾಜ್ಯಗಳಲ್ಲಿ ಹರಡಿತ್ತು ಮತ್ತು ದೇಶದ ಉಳಿದ ಭಾಗಕ್ಕೆ ಹೋಲಿಸಿದರೆ ರಾಜಸ್ಥಾನ, ಮಹಾರಾಷ್ಟ್ರ,ಗುಜರಾತ, ಪಂಜಾಬ್, ಹಿಮಾಚಲ ಪ್ರದೇಶ,‌ ಹರ್ಯಾಣ ಮತ್ತು ಕರ್ನಾಟಕಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳು ಸಾವನ್ನಪ್ಪಿದ್ದವು. 2023,ಫೆಬ್ರವರಿಗೆ ಇದ್ದಂತೆ 1,85,841 ಜಾನುವಾರುಗಳು ಮೃತಪಟ್ಟಿದ್ದವು. 32,73,762 ಜಾನುವಾರುಗಳು ಚೇತರಿಸಿಕೊಂಡಿದ್ದವು. 8,81,77,649 ಜಾನುವಾರುಗಳಿಗೆ ಲಸಿಕೆ ನೀಡಲಾಗಿತ್ತು. 2023ರಲ್ಲಿ ಇನ್ನೂ 22,313 ಸಾವುಗಳು ವರದಿಯಾಗಿವೆ.

ಬೆಂಗಳೂರಿನ ಬಯೊವೆಟ್ ಪ್ರೈ.ಲಿ.,ಹೈದರಾಬಾದ್‌ನ ಇಂಡಿಯನ್ ಇಮ್ಯುನಾಲಾಜಿಕಲ್ ಮತ್ತು ಪುಣೆಯ ಇನ್‌ಸ್ಟಿಟ್ಯೂಟ್ ಆಫ್ ವೆಟರ್ನರಿ ಬಯಾಲಾಜಿಕಲ್ ಪ್ರಾಡಕ್ಟ್ಸ್ ದೇಶಿಯವಾಗಿ ಎಲ್‌ಎಸ್‌ಡಿ ನಿರೋಧಕ ಲಸಿಕೆ (ಲಂಪಿಪ್ರೊವ್ಯಾಕ್‌ಇಂಡ್)ಯನ್ನು ತಯಾರಿಸಲು ಹಿಸ್ಸಾರ್‌ನ ನ್ಯಾಷನಲ್ ರೀಸರ್ಚ್ ಸೆಂಟರ್ ಆನ್ ಈಕ್ವೈನ್ಸ್‌ನಿಂದ ಲಸಿಕೆ ತಂತ್ರಜ್ಞಾನವನ್ನು ಪಡೆದುಕೊಂಡಿರುವುದನ್ನು ಸಮಿತಿಯು ಗಮನಿಸಿದೆ. ಎಲ್‌ಎಸ್‌ಡಿ ಹರಡುವಿಕೆಯನ್ನು ನಿಯಂತ್ರಿಸಲು ವಿಶೇಷವಾಗಿ ಅಭಿವೃದ್ಧಿಗೊಳಿಸಲಾಗಿರುವ ಲಂಪಿಪ್ರೊವ್ಯಾಕ್‌ಇಂಡ್‌ನ ವಾಣಿಜ್ಯ ಉತ್ಪಾದನೆ/ತಯಾರಿಕೆಗಾಗಿ ಎಲ್ಲ ನಿಯಂತ್ರಕ ಅನುಮೋದನೆಗಳನ್ನು ಪಡೆದುಕೊಳ್ಳಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಮಿತಿಯು ಕೇಂದ್ರಕ್ಕೆ ಸೂಚಿಸಿದೆ.

No Comments

Leave A Comment