ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ: ಚಂಡೀಗಢದಲ್ಲಿ ಇಬ್ಬರು ಶೂಟರ್ ಸೇರಿದಂತೆ ಮೂವರ ಬಂಧನ
ನವದೆಹಲಿ: ಶ್ರೀ ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಇಬ್ಬರು ಶೂಟರ್‌ಗಳು ಸೇರಿದಂತೆ ಮೂವರನ್ನು ಚಂಡೀಗಢದಲ್ಲಿ ರಾಜಸ್ಥಾನ ಪೊಲೀಸರೊಂದಿಗೆ ಭಾನುವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ದೆಹಲಿ ಪೊಲೀಸರ ಅಪರಾಧ ವಿಭಾಗ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಸೆಂಬರ್ 5 ರಂದು ರಾಜಸ್ಥಾನದ ಜೈಪುರದಲ್ಲಿರುವ ಅವರ ಮನೆಯಲ್ಲಿ ಗೊಗಮೆಡಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಗೊಗಮೇಡಿ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸುತ್ತಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಇತ್ತೀಚೆಗೆ ಹೊರಬಿದ್ದಿತ್ತು. ಆರೋಪಿಗಳನ್ನು ಜೈಪುರದ ರೋಹಿತ್ ರಾಥೋಡ್ ಮತ್ತು ಹರಿಯಾಣದ ಮಹೇಂದ್ರಗಢದ ನಿತಿನ್ ಫೌಜಿ ಎಂದು ಪೊಲೀಸರು ಗುರುತಿಸಿದ್ದಾರೆ ಮತ್ತು ಅವರ ಬಂಧನಕ್ಕೆ ಮಾಹಿತಿ ನೀಡುವವರಿಗೆ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಲಾಗಿತ್ತು.
ದೆಹಲಿ ಪೊಲೀಸ್ ಅಪರಾಧ ವಿಭಾಗದ ತಂಡವು ರಾಜಸ್ಥಾನ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ ಜೋಡಿಯನ್ನು ಚಂಡೀಗಢದ ಸೆಕ್ಟರ್ 22 ರಿಂದ ಬಂಧಿಸಿದೆ. ಅವರ ಜೊತೆಯಲ್ಲಿ ಸಹಚರ ಉಧಮ್ ಸಿಂಗ್ ಕೂಡ ಸಿಕ್ಕಿಬಿದ್ದಿದ್ದಾನೆ. ಬಂಧಿತರನ್ನು ಹೆಚ್ಚಿನ ವಿಚಾರಣೆಗಾಗಿ ಜೈಪುರ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಜೈಪುರಕ್ಕೆ ಕರೆತಂದ ನಂತರ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಔಪಚಾರಿಕವಾಗಿ ಬಂಧಿಸಲಾಗುವುದು ಎಂದು ಜೈಪುರ ಪೊಲೀಸ್ ಆಯುಕ್ತ ಬಿಜು ಜಾರ್ಜ್ ಜೋಸೆಫ್ ತಿಳಿಸಿದ್ದಾರೆ. ಗೊಗಮೆಡಿಯನ್ನು ಕೊಲ್ಲಲು ಶೂಟರ್‌ಗಳಿಗೆ ಗುತ್ತಿಗೆ ನೀಡಿದ್ದ ಆರೋಪದ ಮೇಲೆ ಜೈಪುರದಲ್ಲಿ ಶನಿವಾರ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿತ್ತು.