ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಲಿದೆ. ಮತ್ತು 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ....
TNIE ವರದಿ ಸತ್ಯ: ಜಾತಿ ಗಣತಿ ಮೂಲ ವರದಿ ನಾಪತ್ತೆಯಾಗಿದೆ ಎಂದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ
ಬೆಂಗಳೂರು: ಜಾತಿ ಗಣತಿ ವರದಿ ಎಂದೇ ಜನಪ್ರಿಯವಾಗಿರುವ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೂಲ ಪ್ರತಿ ನಾಪತ್ತೆಯಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಒಪ್ಪಿಕೊಂಡಿದ್ದಾರೆ.
ವರದಿ ನಿಗೂಢವಾಗಿ ಕಣ್ಮರೆಯಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ(New Indian Express) ಅಕ್ಟೋಬರ್ 6 ರಂದು ವರದಿ ಮಾಡಲಾಗಿತ್ತು.ಆಗ ಜಯಪ್ರಕಾಶ ಹೆಗ್ಡೆಯವರು ಪತ್ರಿಕೆ ವರದಿಯನ್ನು ನಿರಾಕರಿಸಿದ್ದರು. ಆಗಿನ ಸದಸ್ಯ-ಕಾರ್ಯದರ್ಶಿಗಳ ಸಹಿ ಒಳಗೊಂಡಿದ್ದ ಕಾಂತರಾಜ್ ಆಯೋಗದ ವರದಿಯು ಆಯೋಗದ ಕಚೇರಿಯಿಂದ ನಾಪತ್ತೆಯಾಗಿದೆ ಎಂದು ಈಗ ಅಧಿಕೃತವಾಗಿ ತಿಳಿಸಿದ್ದಾರೆ.
ಆಯೋಗದ ಅಧ್ಯಕ್ಷರಾಗಿ ಹೆಗ್ಡೆಯವರ ಅಧಿಕಾರಾವಧಿ ನಾಡಿದ್ದು ನವೆಂಬರ್ 26 ಕ್ಕೆ ಮುಕ್ತಾಯವಾಗುತ್ತಿದ್ದು, ಅಂದೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ನಿರೀಕ್ಷೆಯಿತ್ತು. ಆದರೆ ಈಗ ಸರ್ಕಾರ ಅವರ ಅಧಿಕಾರಾವಧಿಯನ್ನು ಒಂದು ತಿಂಗಳು ವಿಸ್ತರಿಸಿದೆ, ಇದರರ್ಥ ವರದಿ ಸಲ್ಲಿಕೆಯೂ ವಿಳಂಬವಾಗಬಹುದು.
ಆದಷ್ಟು ಶೀಘ್ರ ವರದಿ ಸಲ್ಲಿಕೆ: ಅಂದಿನ ಸದಸ್ಯ ಕಾರ್ಯದರ್ಶಿ ಅನ್ಬುಕುಮಾರ್ ಅವರ ಸಹಿ ಇರುವ ವರದಿಯ ಹಾರ್ಡ್ ಕಾಪಿ ನಾಪತ್ತೆಯಾಗಿದೆ. ವರ್ಕ್‌ಶೀಟ್ ಕೂಡ ಕಾಣೆಯಾಗಿದೆ. ಆದರೆ ನಾವು ಸಂಗ್ರಹಿಸಿದ ಅಂಕಿಅಂಶದ ಪ್ರತಿಯನ್ನು ಹೊಂದಿದ್ದೇವೆ. ಇದು ಪಿಎಸ್ ಯುನಲ್ಲಿ ವಿದ್ಯುನ್ಮಾನವಾಗಿ ಸುರಕ್ಷಿತವಾಗಿದೆ ಎಂದರು.
ಹಾಗಾದರೆ ನವೆಂಬರ್ 26 ರಂದು ವರದಿಯನ್ನು ಸಲ್ಲಿಸಲಾಗುತ್ತದೆಯೇ ಎಂದು ಕೇಳಿದಾಗ, ನಾವು ಅದನ್ನು ಆದಷ್ಟು ಬೇಗ ಪ್ರಸ್ತುತಪಡಿಸುತ್ತೇವೆ. ಇದಕ್ಕಾಗಿ ಹಗಲಿರುಳು ಕೆಲಸ ಮಾಡುತ್ತಿದ್ದೇವೆ ಎಂದರು.
ನಂತರ ನಿನ್ನೆ ನಡೆದ ವಿದ್ಯಾಮಾನದಲ್ಲಿ, ಜಯಪ್ರಕಾಶ ಹೆಗ್ಡೆಯವರು ವರದಿಯನ್ನು ಸಲ್ಲಿಸಲು ಒಂದು ತಿಂಗಳ ಹೆಚ್ಚಿನ ಕಾಲಾವಕಾಶವನ್ನು ಕೋರಿ ಸರ್ಕಾರಕ್ಕೆ ಪತ್ರ ಬರೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವಿಯನ್ನು ಸ್ವೀಕರಿಸಿದ್ದಾರೆ.
ಆದರೆ ಅಂತಹ ವಿಸ್ತರಣೆಯನ್ನು ನೀಡಲಾಗುವುದಿಲ್ಲ ಮತ್ತು ಆಯೋಗದ ಆಡಳಿತ ನಿಯಮಗಳ ಅಡಿಯಲ್ಲಿ ಹೊಸ ನೇಮಕಾತಿಯನ್ನು ಮಾತ್ರ ಮಾಡಬಹುದು ಎಂದು ಕಾನೂನು ತಜ್ಞರು ಹೇಳುತ್ತಾರೆ. ಹೆಗ್ಡೆ ಅವರನ್ನು ಮತ್ತೊಂದು ಪೂರ್ಣಾವಧಿಗೆ ಆಯೋಗದ ಅಧ್ಯಕ್ಷರನ್ನಾಗಿ ಮರುನೇಮಕ ಮಾಡಬಹುದು ಎಂದು ಅವರು ಹೇಳಿದರು. ಕಾಂತರಾಜ್ ಆಯೋಗವನ್ನು ಕಾಂಗ್ರೆಸ್ ಸರ್ಕಾರ ನೇಮಿಸಿದ್ದು, ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಅದನ್ನು ತೆಗೆದುಹಾಕಲಾಗಿದೆ. ನಂತರ ಹೆಗ್ಡೆ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
ಕಾಂಗ್ರೆಸ್ ಅಧಿಕಾರ ವಹಿಸಿಕೊಂಡಾಗ, ಜಯಪ್ರಕಾಶ್ ಹೆಗ್ಡೆ ಅವರನ್ನು ಅಧಿಕಾರದಿಂದ ತೆಗೆದುಹಾಕುವ ನಿರೀಕ್ಷೆಯಿತ್ತು. ಆದರೆ ಅದು ಆಗಲಿಲ್ಲ. ಇದೀಗ ವಿಸ್ತರಣೆಗೆ ಸಿಎಂ ಒಪ್ಪಿಗೆ ನೀಡಿದ್ದಾರೆ. ಹಾಗಾದರೆ ಇಲ್ಲಿ ನಡೆದಿದ್ದಾದರೂ ಏನು?ವರದಿಯ ಮೂಲ ಪ್ರತಿ ನಾಪತ್ತೆಯಾಗಿರುವ ಸಾಧ್ಯತೆಯ ಬಗ್ಗೆ ಆಯೋಗದ ಮಾಜಿ ಅಧ್ಯಕ್ಷ ಸಿಎಸ್ ದ್ವಾರಕಾನಾಥ್ ಅವರು, ಇಲ್ಲಿ ನಿಖರತೆ, ಪ್ರಾಮಾಣಿಕತೆ ಮುಖ್ಯವಾಗಿದೆ. ಸದಸ್ಯ-ಕಾರ್ಯದರ್ಶಿ ಸರ್ಕಾರ ಮತ್ತು ಆಯೋಗದ ನಡುವಿನ ಕೊಂಡಿಯಾಗಿರುತ್ತಾರೆ ಎಂದರು.
ಅವರು ವರದಿಗೆ ಸಹಿ ಮಾಡದಿದ್ದರೆ ಸಮಸ್ಯೆಯಾಗುತ್ತದೆ. ಸಲ್ಲಿಸಿರುವುದು ಅಧಿಕೃತ ವರದಿ ಎಂದು ನಮಗೆ ಹೇಗೆ ತಿಳಿಯುತ್ತದೆ ಎಂದು ಕೇಳುತ್ತಾರೆ.
ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್, ಕೋಟ್ಯಂತರ ರೂಪಾಯಿ ತೆರಿಗೆದಾರರ ಹಣವನ್ನು ಖರ್ಚು ಮಾಡಿ ವರದಿ ಸಿದ್ಧಪಡಿಸಿದ್ದರೂ ನಮ್ಮ ಬಳಿ ಮೂಲ ಪ್ರತಿ ಇಲ್ಲದಿರುವುದು ದಿಗ್ಭ್ರಮೆ ಮೂಡಿಸಿದೆ. ಇದು ಈ ವರದಿಯ ಸತ್ಯಾಸತ್ಯತೆಯನ್ನು ನಾವು ಅನುಮಾನಿಸುವಂತೆ ಮಾಡುತ್ತದೆ.
ಇಲಾಖೆಯಲ್ಲಿ ಮೂಲ ಪ್ರತಿ ಕಳೆದು ಹೋದರೆ ಯಾವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ, ಇದಕ್ಕೆ ಕಾರಣರಾದ ಅಧಿಕಾರಿಯ ವಿರುದ್ಧ ಯಾವ ಶಿಸ್ತು ಕ್ರಮ ಕೈಗೊಂಡಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದರು. ಈ ಮಧ್ಯೆ, ಮೂಲ ವರದಿ ನಾಪತ್ತೆಯಾಗಿರುವ ಬಗ್ಗೆ ಇತ್ತೀಚೆಗೆ ಜಯಪ್ರಕಾಶ ಹೆಗ್ಡೆ ಅವರು ಆಂತರಿಕ ವಿಚಾರಣೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.