ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​

ಅಗ್ನಿ ಕುಂಡದ ಮೇಲೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ!

ಪಕ್ಷದ ಸಾರಥ್ಯ ವಹಿಸಿರುವ ಪುತ್ರನ ಯಶಸ್ಸಿನ ಹಾದಿಗೆ ಯಾವುದೇ ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ವಹಿಸಿರುವ ಯಡಿಯೂರಪ್ಪ, ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಚಾರದಲ್ಲೂ ತಮ್ಮ ಮಾತೇ ಅಂತಿಮವಾಗುವಂತೆ ನೋಡಿಕೊಳ್ಳಲಿದ್ದಾರೆ. ಪ್ರಮುಖವಾಗಿ ವಿಧಾನಸಭೆ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಮಾಜಿ ಸಚಿವರಾದ ಸುನಿಲ್ ಕುಮಾರ್, ಆರ್. ಅಶೋಕ್ , ಡಾ. ಅಶ್ವತ್ಥನಾರಾಯಣ ಹೆಸರು ಕೇಳಿ ಬರುತ್ತಿದೆ.

ಶಾಂತವಾಗಿರುವ ಅಗ್ನಿ ಪರ್ವತದ ಮೇಲೆ ಕುಳಿತ ಸ್ಥಿತಿ

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ, ಶಾಸಕ ಬಿ.ವೈ.ವಿಜಯೇಂದ್ರ ಸ್ಥಿತಿ ಇದು.

ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರ ನೇಮಕವೂ ಸದ್ಯದಲ್ಲೇ ಆಗಲಿದೆ. ಈಗ ತಲೆ ಎತ್ತಿರುವ ಪ್ರಶ್ನೆ ಎಂದರೆ ಬಿಜೆಪಿಯಲ್ಲಿ ಕುದಿಯುತ್ತಿರುವ ಹಿರಿಯ ನಾಯಕರ ಅತೃಪ್ತಿ ಸ್ಫೋಟಿಸುತ್ತಾ ಆಥವಾ ಹಾಗೇ ತಣ್ಣಗಾಗುತ್ತಾ ಎಂಬುದು.

ಒಂದಂತೂ ಸ್ಪಷ್ಟ.ಅಧ್ಯಕ್ಷರಾಗಿ ವಿಜಯೇಂದ್ರ ನೇಮಕದ ಘೋಷಣೆ ಹೊರ ಬಿದ್ದ ತತ್ ಕ್ಷಣವೇ ಪಕ್ಷದ ಹಿರಿಯ ನಾಯಕರಾದ, ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವರಾದ ಸಿ.ಟಿ.ರವಿ, ವಿ.ಸೋಮಣ್ಣ ಸೇರಿದಂತೆ ಕೆಲವರು ನೀಡಿರುವ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಅತೃಪ್ತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತೆ ಇದೆ ಎಂಬುದು ಸ್ಪಷ್ಟ.

ಆರಂಭದ ದಿನಗಳಲ್ಲಿ ಯಡಿಯೂರಪ್ಪನವರಿಗೆ ಜೊತೆಯಾಗಿ ನಿಂತು ಪಕ್ಷ ಕಟ್ಟಿದ, ಒಂದು ಕಾಲಕ್ಕೆ ಅವರ ಪರಮಾಪ್ತರಾಗಿದ್ದ ಈಶ್ವರಪ್ಪ ನೀಡಿರುವ  ಕ್ಷಿಪ್ರ ಪ್ರತಿಕ್ರಿಯೆಯಲ್ಲಿ ಸಾಮೂಹಿಕ ನಾಯಕತ್ವದ ವಿಚಾರವನ್ನು ಮುನ್ನೆಲೆಗೆ ತಂದಿರುವುದಲ್ಲದೇ “ಪಕ್ಷ ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿಲ್ಲ” ಎಂದು ಹೇಳಿರುವುದು ಅಸಮಾಧಾನದ ಬೆಂಕಿ ಇನ್ನೂ ಆರಿಲ್ಲ ಎಂಬುದರ ಮುನ್ಸೂಚನೆ.

ಈ ಸನ್ನಿವೇಶದಲ್ಲೇ ವಿಧಾನ ಮಂಡಲದ ಉಭಯ ಸದನಗಳ ಪ್ರತಿ ಪಕ್ಷದ ನಾಯಕರ ಆಯ್ಕೆಗಾಗಿ ದಿಲ್ಲಿಯಿಂದ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿಯ ಇಬ್ಬರು ವೀಕ್ಷಕರು ಬಂದಿಳಿದಿದ್ದಾರೆ. ಶುಕ್ರವಾರ ಸಂಜೆ ವಿಪಕ್ಷ ನಾಯಕರ ಆಯ್ಕೆಗೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.

ಪುತ್ರನ ಪಟ್ಟಾಭಿಷೇಕದೊಂದಿಗೆ ಯಡಿಯೂರಪ್ಪ ಮತ್ತೆ ಪಕ್ಷದಲ್ಲಿ ಅಧಿಕಾರದ ಕೇಂದ್ರ ಸ್ಥಾನವಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ರಾಜ್ಯ ರಾಜಕಾರಣ ಮತ್ತೆ ಯಡಿಯೂರಪ್ಪ ಸುತ್ತಲೇ ಗಿರಕಿ ಹೊಡೆಯಲಿದೆ. ಪ್ರತಿಪಕ್ಷದ ನಾಯಕರು, ಪಕ್ಷದ ಪದಾಧಿಕಾರಿಗಳ ಆಯ್ಕೆ ಮುಂದಿನ ದಿನಗಳಲ್ಲಿ ಅವರ ಮರ್ಜಿಗೆ ಅನುಸಾರವಾಗೇ ನಡೆಯಲಿವೆ ಎಂದು ಹೇಳಲಾಗುತ್ತಿದೆ.

ವಿಧಾನ ಪರಿಷತ್ ಗಿಂತ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಆಯ್ಕೆ ಹೆಚ್ಚು ಪ್ರಾಧಾನ್ಯತೆ ಗಳಿಸಲಿದೆ. ವಿಧಾನಸಭೆಯ ಪ್ರತಿಪಕ್ಷದ ನಾಯಕರೆ ಶಾಸಕಾಂಗ ಪಕ್ಷದ ನಾಯಕರಾಗಿಯೂ ಆಯ್ಕೆಯಾಗುವುದರಿಂದ ರಾಜಕೀಯವಾಗಿ ಅದೊಂದು ಪ್ರಮುಖ ಹುದ್ದೆ ಎನಿಸಿದೆ. ಅದಕ್ಕಾಗೇ ಈ ಸ್ಥಾನಕ್ಕೆ ಜಾತಿ ಲೆಕ್ಕಾಚಾರದ ಆಧಾರದಲ್ಲಿ ಪೈಪೋಟಿ ಶುರುವಾಗಿದೆ. ಪಕ್ಷದಲ್ಲಿರುವ ಯಡಿಯೂರಪ್ಪ ವಿರೋಧಿ ಗುಂಪೂ ಈ ವಿಚಾರದಲ್ಲಿ ತನ್ನದೇ ಆಯ್ಕೆಗೆ ಪಟ್ಟು ಹಿಡಿಯುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.

ಪಕ್ಷದ ಸಾರಥ್ಯ ವಹಿಸಿರುವ ತಮ್ಮ ಪುತ್ರನ ಯಶಸ್ಸಿನ ಹಾದಿಗೆ ಯಾವುದೇ ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ವಹಿಸಿರುವ ಯಡಿಯೂರಪ್ಪ, ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಚಾರದಲ್ಲೂ ತಮ್ಮ ಮಾತೇ ಅಂತಿಮವಾಗುವಂತೆ ನೋಡಿಕೊಳ್ಳಲಿದ್ದಾರೆ. ಪ್ರಮುಖವಾಗಿ ವಿಧಾನಸಭೆ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಮಾಜಿ ಸಚಿವರಾದ ಸುನಿಲ್ ಕುಮಾರ್, ಆರ್. ಅಶೋಕ್, ಡಾ. ಅಶ್ವತ್ಥನಾರಾಯಣ ಹೆಸರು ಕೇಳಿ ಬರುತ್ತಿದೆ.

ಸುನಿಲ್ ಕುಮಾರ್ ಆಯ್ಕೆಗೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಒತ್ತಡ ಹೇರುತ್ತಿದ್ದಾರೆ. ಹಿಂದುಳಿದ ವರ್ಗಕ್ಕೆ ಪ್ರಾತಿನಿಧ್ಯದ ಜತೆಗೇ ಯುವ ನಾಯಕತ್ವಕ್ಕೆ ಆದ್ಯತೆ ನೀಡಿದಂತಾಗುತ್ತದಲ್ಲದೇ ಶಾಸಕಾಂಗ ಪಕ್ಷದ ಮೇಲೆ ತಮ್ಮದೂ ಹಿಡಿತ ಇದ್ದಂತಾಗುತ್ತದೆ ಎಂಬುದು ಅವರ ಲೆಕ್ಕಾಚಾರ.

ರಾಜ್ಯ ಬಿಜೆಪಿಯಲ್ಲಿ ಪರ್ಯಾಯ ಅಧಿಕಾರ ಕೇಂದ್ರವಾಗಿರುವ ಸಂತೋಷ್ ಮತ್ತು ಯಡಿಯೂರಪ್ಪ ನಡುವಿನ ಸಂಬಂಧ ಅಷ್ಟಕ್ಕಷ್ಟೆ. ಪ್ರಾಬಲ್ಯ ಉಳಿಸಿಕೊಳ್ಳಲು ಇಬ್ಬರ ನಡುವೆ ಶೀತಲ ಸಮರ ಮುಂದುವರಿದೇ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರಬಲ ಒಕ್ಕಲಿಗ ಸಮುದಾಯವನ್ನು ಬಿಟ್ಟು ಈ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡುವ ಸಾಧ್ಯತೆಗಳು ದೂರ ಎಂಬುದು ಬಿಜೆಪಿಯ ಮೂಲಗಳೇ ನಿಡುವ ಸ್ಪಷ್ಟನೆ.

ಹೋರಾಟದ ಹಿನ್ನಲೆಯಿಂದ ಬಂದ ಸುನಿಲ್ ಕುಮಾರ್ ಕೊಂಚ ನಿಷ್ಠುರವಾದಿ ಸಂಘ ಪರಿವಾರದ ಕಟ್ಟಾಳು, ಉಳಿದ ಇಬ್ಬರಿಗೆ ಹೋಲಿಸಿದರೆ ಯಡಿಯೂರಪ್ಪ ಜತೆಗಿನ ಅವರ ಸಂಬಂಧ ಅಷ್ಟಕ್ಕಷ್ಟೆ .ಹಾಗೆಂದು ಉಳಿದ ಕೆಲವರಂತೆ ಬಹಿರಂಗವಾಗಿ ಯಡಿಯೂರಪ್ಪ ಜತೆ ಸಂಘರ್ಷಕ್ಕಿಳಿಯದೆ ಪಕ್ಷದಲ್ಲಿ ಘನತೆ ಕಾಪಾಡಿಕೊಂಡಿದ್ದು, ಅವರಿಗೆ ವರಿಷ್ಠರ ಬೆಂಬಲವೂ ಇದೆ.

ಅದರೆ ಜಾತಿ ಮತ್ತು ಯಡಿಯೂರಪ್ಪ ನಾಯಕತ್ವಕ್ಕಿರುವ ನಿಷ್ಠೆಯೇ ಪ್ರಧಾನವಾದರೆ ಆರ್. ಅಶೋಕ್ ಆಯ್ಕೆಗೆ ಒಲವು ವ್ಯಕ್ತವಾಗಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಂತಹ ಘಟಾನುಘಟಿ ನಾಯಕರನ್ನು ಸದನದಲ್ಲಿ ಅಷ್ಟೇ ದಿಟ್ಟತನ ದಿಂದ ಎದುರಿಸುವ ಛಾತಿಯುಳ್ಳ ವ್ಯಕ್ತಿ ಪ್ರತಿಪಕ್ಷದ ನಾಯಕನಾಗಬೇಕು. ಅಶೋಕ್ ಗೆ ಹಿರಿತನ ಮತ್ತು ಜಾತಿಯ ಬೆಂಬಲ ಇದೆಯಾದರೂ ಸರ್ಕಾರದಲ್ಲಿರುವ ದಿಗ್ಗಜರನ್ನು ಎದುರಿಸುವ ಸಾಮರ್ಥ್ಯ ಇಲ್ಲ. ಇಲ್ಲಿಯವರೆಗೆ ಅವರು ರಾಜಕೀಯವಾಗಿ ಅನುಸರಿಸಿಕೊಂಡು ಬಂದಿರುವುದು ಹೊಂದಾಣಿಕೆಯ ಹಾದಿ.ಸದನದಲ್ಲಿ ಪಟ್ಟು ಹಿಡಿದು ಸರ್ಕಾರವನ್ನು ಎದುರಿಸುವ, ನೀತಿ ನಿರ್ಧಾರಗಳನ್ನು ಪ್ರತಿಭಟಿಸುವ, ಹಾಗೆಯೇ ಸಹೋದ್ಯೋಗಿ ಶಾಸಕರ ಮೇಲೆ ಪ್ರಭಾವ ಬೀರುವ ಹಾಗೆಯೆ ಸಾರ್ವತ್ರಿಕವಾಗಿ ಪಕ್ಷದ ಜನಪ್ರಿಯತೆಯನ್ನೂ ಹೆಚ್ಚಿಸುವ ಅರ್ಹತೆ ಪ್ರತಿಪಕ್ಷ ನಾಯಕನಿಗೆ ಇರಬೇಕು.

ಈ ವಿಚಾರದಲ್ಲಿ ಅಶೋಕ್ ಗೆ ಕೆಲವು ಸಮಸ್ಯೆಗಳಿವೆ. ಈ ಹಿಂದೆ ಚುನಾವಣಾ ಪೂರ್ವದಲ್ಲಿ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ತನಗೆ ವಹಿಸಿದ್ದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಕುಮಾರಸ್ವಾಮಿಯವರ ಆರ್ಭಟ ಎದುರಿಸಲು ಸಾಧ್ಯವಾಗದೇ ಅವರು ಹಿಂದೆ ಸರಿದಿದ್ದನ್ನು ನೆನಪು ಮಾಡಿಕೊಳ್ಳುವ ಬಿಜೆಪಿ ಪ್ರಮುಖ ಮುಖಂಡರೊಬ್ಬರು ಅಶೋಕ್ ಗಿಂತ ಡಾ. ಅಶ್ವತ್ಥನಾರಾಯಣ ಆ ಸ್ಥಾನಕ್ಕೆ ಹೆಚ್ಚು ಅರ್ಹರು ಎಂಬ ವಾದ ಮುಂದಿಡುತ್ತಾರೆ.

ರಾಮನಗರದಲ್ಲಿ ಡಿ.ಕೆ.ಶಿವಕುಮಾರ್ ಸೋದರರ ಪಾರುಪತ್ಯಕ್ಕೆ ಬಹಿರಂಗ ಸವಾಲೊಡ್ಡುವ ಮೂಲಕ ಡಾ. ಅಶ್ವತ್ಥನಾರಾಯಣ ಈ ಹಿಂದೆ ಗಮನ ಸೆಳೆದಿದ್ದರು. ಇದು ಬಿಜೆಪಿ ವಲಯಗಳಲ್ಲೂ ಮೆಚ್ಚುಗೆ ಗಳಿಸಿತ್ತು. ಫಲಿತಾಂಶ ಏನೇ ಇರಲಿ ಸಂದರ್ಭ ಎದುರಾದರೆ ತಾನು ಚಳಿ ಬಿಟ್ಟು ಬೀದಿ ಹೋರಾಟಕ್ಕೂ ಸಿದ್ಧ ಎಂಬುದನ್ನು ಋಜುವಾತುಪಡಿಸಿದ್ದಾರೆ. ಸಂದರ್ಭವಶಾತ್ ಸುನಿಲ್ ಕುಮಾರ್ ಹೆಸರಿಗೆ ಒಮ್ಮತ ಮೂಡದಿದ್ದರೆ ಅಶ್ವತ್ಥನಾರಾಯಣ ಬೆಂಬಲಕ್ಕೆ ಸಂತೋಷ್ ಬಣ ನಿಲ್ಲಲಿದೆ. ಯಡಿಯೂರಪ್ಪನವರಿಗೂ ಆಪ್ತರಾಗಿರುವುದರಿಂದ ಜಾತಿ, ಅರ್ಹತೆ ದೃಷ್ಟಿಯಿಂದಲೂ ಅವರ ಆಯ್ಕೆಗೆ ಯಡಿಯೂರಪ್ಪ ಕೂಡಾ ಸಮ್ಮತಿ ಸೂಚಿಸಬಹುದು ಎಂಬ ನಿರೀಕ್ಷೆಯೂ ಇದೆ.

ಆದರೆ ಇಲ್ಲೂ ಕಾಡುವ ಪ್ರಮುಖ ಅಂಶ ಎಂದರೆ ವಿಧಾನಸಭೆ ಪ್ರತಿಪಕ್ಷದ ನಾಯಕರಾಗುವವರು ಸಮಾನಾಂತರ ಅಧಿಕಾರದ ಕೇಂದ್ರ ಆಗಬಾರದು ಎಂಬುದು ಯಡಿಯೂರಪ್ಪನವರ ದೂರ ದೃಷ್ಟಿ. ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ನಡೆಯುವ ಬೆಳವಣಿಗೆಯ ಮೇಲೆ ಕಣ್ಣಿಟ್ಟಿರುವ ಅವರು, ಪುತ್ರನ ಯಶಸ್ಸಿನ ನಾಗಾಲೋಟಕ್ಕೆ ಅಡ್ಡಿಯಾಗದಂತೆ ಎಚ್ಚರ ವಹಿಸಲಿದ್ದಾರೆ. ಈ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರೇ ಅವರಿಗೆ ಮಾದರಿ.

ಬೆಳವಣಿಗೆಗಳನ್ನು ನೊಡಿದರೆ ಹೈಕಮಾಂಡ್ ನ ಸಂದೇಶ ಹೊತ್ತು ಆಗಮಿಸಿರುವ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಶಾಸ್ತ್ರಕ್ಕೆಂಬಂತೆ ಶಾಸಕರ ಅಭಿಪ್ರಾಯ ಆಲಿಸಿ ದಿಲ್ಲಿಗೆ ಮರಳಿದ ನಂತರ ವರಿಷ್ಠರೊಂದಿಗೆ ಸಮಾಲೋಚಿಸಿ ಅಲ್ಲಿಂದಲೇ ಪ್ರತಿಪಕ್ಷದ ನಾಯಕನ ಹೆಸರನ್ನು ಘೋಷಿಸುವ ಸಾಧ್ಯತೆಗಳೂ ಇವೆ.

ಇನ್ನು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ.

ಬೂದಿ ಮುಚ್ಚಿದ ಕೆಂಡ: ವಿಜಯೇಂದ್ರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಪಕ್ಷದ ಪ್ರಮುಖ ಮುಖಂಡರಾದ ಬಸವನಗೌಡ ಪಾಟೀಲ್ ಯತ್ನಾಳ್, ವಿ.ಸೋಮಣ್ಣ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ. ಸಿ.ಟಿ. ರವಿ ಸೇರಿದಂತೆ ಹಲವು ಪ್ರಮುಖರ ಗೈರು ಹಾಜರಿ ಪಕ್ಷದಲ್ಲಿ ಅತೃಪ್ತಿ ಬೂದಿ ಮುಚ್ಚಿದ ಕೆಂಡದಂತಿದೆ ಎಂಬುದನ್ನ ಸಾದರಪಡಿಸಿದೆ. ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಬದಲಾದ ಸನ್ನಿವೇಶದಲ್ಲಿ ಮೌನಕ್ಕೆ ಶರಣಾಗಿದ್ದಾರೆ.

ತಣ್ಣಗಾದ ಈಶ್ವರಪ್ಪ: ಇನ್ನುಳಿದಂತೆ ವಿಜಯೇಂದ್ರ ಹೆಸರು ಘೋಷಣೆ ಆಗುತ್ತಿದ್ದಂತೆ ಸಿಡಿದು ನಿಂತು ಸಾಮೂಹಿಕ ನಾಯಕತ್ವದ ಹೇಳಿಕೆ ನೀಡಿದ್ದ ಈಶ್ವರಪ್ಪ ಸದ್ಯಕ್ಕೆ ತಣ್ಣಗಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ತಮ್ಮ ಪುತ್ರನನ್ನು ಹಾವೇರಿ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಪ್ರಯತ್ನದಲ್ಲಿರುವ ಅವರದ್ದು ಲಾಭ – ನಷ್ಟಗಳ ಲೆಕ್ಕಾಚಾರ.

ಯಡಿಯೂರಪ್ಪ ಜತೆ ಸೇರಿ ನಾಲ್ಕು ದಶಕಗಳಿಂದ ಸಂಘಟನೆಗಾಗಿ ದುಡಿದು ಪಕ್ಷ ಮತ್ತು ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ ಈಶ್ವರಪ್ಪ ಯಡಿಯೂರಪ್ಪನವರ ಮಟ್ಟಕ್ಕೆ ಪ್ರಬಲ ನಾಯಕನಾಗಿ ಬೆಳೆದು ಪಕ್ಷದೊಳಗೆ ತಮ್ಮ ಹಿಡಿತ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಬಿಜೆಪಿಯಲ್ಲಿ ಸಮರ್ಥ ಹಿಂದುಳಿದ ವರ್ಗದ ಪ್ರಭಾವಿ ನಾಯಕನಾಗಿ ನಿಲ್ಲುವ, ಅವಕಾಶಗಳಿದ್ದರೂ ಅವೆಲ್ಲವನ್ನು ಕೈ ಚೆಲ್ಲಿದ ಅವರೀಗ ಜಿಲ್ಲೆಯಲ್ಲೂ ನೆಲೆ ಕಂಡುಕೊಳ್ಳುವಲ್ಲಿ ಪರದಾಡುತ್ತಿದ್ದಾರೆ.

ಸೋಮಣ್ಣ ಪರದಾಟ: ವಿಜಯೇಂದ್ರ ವಿರುದ್ಧ ಸಿಡಿದು ನಿಂತಿರುವ ಮಾಜಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರಲೂ ಆಗದೇ, ಬಿಜೆಪಿಯಲ್ಲಿ ಇರಲೂ ಆಗದೇ ಚಡಪಡಿಸುತ್ತಿದ್ದಾರೆ. ಇಡೀ ಬಿಜೆಪಿಯ ವಿದ್ಯಮಾನಗಳನ್ನು ಗಮನಿಸಿದರೆ ಪಕ್ಷದೊಳಗೆ ತಮ್ಮ ಪುತ್ರನ ಬೆಳವಣಿಗೆಗೆ ಅಡ್ಡಿಯಾಗಿದ್ದ  ತಮ್ಮದೇ ಸಮುದಾಯದ ಹಲವು ಮುಖಂಡರನ್ನು ತಮ್ಮ ದಾರಿಯಿಂದ ಪಕ್ಕಕ್ಕೆ ಸರಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಈ ವಿಚಾರದಲ್ಲಿ ಅವರದ್ದು ಜಾಣ್ಮೆಯ ನಡೆ. ಪಕ್ಷದ ಸಾರಥ್ಯ ವಹಿಸಿರುವ ಪುತ್ರನನ್ನು ಭವಿಷ್ಯದಲ್ಲಿ ಸಂಪೂರ್ಣ ನೆಲೆ ನಿಲ್ಲಿಸಲು ಮತ್ತು ಬಯಸಿದ ಅಧಿಕಾರ ಪಡೆಯಲು ಈ ಜಾಣ್ಮೆ ನೆರವು ನೀಡುವುದೆ? ಎಂಬುದು ಸದ್ಯದ ಪ್ರಶ್ನೆ. ಲೋಕಸಭೆ ಚುನಾವಣೆ ಎದುರಾಗಿರುವ ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ಎದುರಾಳಿಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

No Comments

Leave A Comment