ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಪುತ್ತಿಗೆ ಪರ್ಯಾಯದ ಸ್ವಾಗತ ಸಮಿತಿ ಕಾರ್ಯಾಲಯ ಉದ್ಘಾಟನೆ,ಲಾ೦ಛನ ಬಿಡುಗಡೆ(56pic)

ಉಡುಪಿ: ಭಾವಿ ಪರ್ಯಾಯ ಪುತ್ತಿಗೆ ಮಠದ ಪರ್ಯಾಯ ಮಹೋತ್ಸವದ ಸ್ವಾಗತ ಸಮಿತಿ ಕಾರ್ಯಾಲಯವನ್ನು ಇಲ್ಲಿನ ಸುಗುಣ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಮಿತಿ ಗೌರವಾಧ್ಯಕ್ಷ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.

ಭಗವತ್ಕಾರ್ಯಗಳಿಂದ ವಿಶ್ವಕ್ಕೇ ಒಳ್ಳೆಯದಾಗಬೇಕು. ಪ್ರಸ್ತುತ ಪ್ರಾಕೃತಿಕ, ಪ್ರಾದೇಶಿಕ ಹಾಗೂ ರಾಜಕೀಯ ಹಾನಿ ನಡೆಯುತ್ತಿದೆ. ಭಗವದ್ಗೀತೆಯ ಅರಿವು ಈ ಎಲ್ಲದಕ್ಕೂ ಪರಿಹಾರವಾಗಬಲ್ಲುದು ಎಂದರು.

ತಾಯಿಗೆ ಬಾಯಿಯಲ್ಲಿ ಜಗವನ್ನೇ ತೋರಿದ ಶ್ರೀಕೃಷ್ಣನಂತೆ ವಿಶ್ವಕ್ಕೇ ನಾಯಕನಂತೆ ಭಾರತ, ವಿಶ್ವಕ್ಕೆ ಒಳ್ಳೆಯ ಶಾಂತಿಯ ಸಂದೇಶ ಕೊಡುವಂತೆ ಆಗಬೇಕು ಎಂದು ಆಶಿಸಿದ ಡಾ| ಹೆಗ್ಗಡೆ ಅವರು ವಿಶ್ವಕ್ಕೆ ಒಳಿತಾಗುವಂತೆ ಮಾಡೋಣ ಎಂದರು.

ಉಡುಪಿ ಆತಿಥ್ಯಕ್ಕೆ ಹೆಸರಾದುದು. ಹಾಗಾಗಿ ಆತಿಥ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಅದರ ಬಗ್ಗೆ ಗಮನಹರಿಸಬೇಕು. ಶ್ರೀಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಅಗತ್ಯ ಸೇವೆಗೆ ಸಿದ್ಧರಿದ್ದು, ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಅಪೇಕ್ಷೆ ಈಡೇರಿಸುವಲ್ಲಿ ಪ್ರಯತ್ನಿಸೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಪುತ್ತಿಗೆ ಮಠ ಪರ್ಯಾಯ ಮಹೋತ್ಸವ ಅಂತಾರಾಷ್ಟ್ರೀಯ ಮಟ್ಟದ ಪರ್ಯಾಯವಾಗಿ ನಡೆಯಬೇಕಿದೆ. ಅದಕ್ಕೆ ಸರ್ವರ ಸಹಕಾರ ಅಗತ್ಯ ಎಂದರು.

ಸಮಿತಿ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್, ಈ ಬಾರಿಯ ಪರ್ಯಾಯ ಮಹೋತ್ಸವ ಅದ್ದೂರಿಯಾಗಿ ನಡೆಸಲುದ್ದೇಶಿಸಿದ್ದು, ಕಿನ್ನಿಮೂಲ್ಕಿ ಸ್ವಾಗತ ಗೋಪುರದಿಂದ ವೈಭವದ ಮೆರವಣಿಗೆ ನಡೆಸುವ ಚಿಂತನೆ ಇದೆ. ಮೆರವಣಿಗೆಯಲ್ಲಿ ರಾಷ್ಟ್ರ, ರಾಜ್ಯ ಮಟ್ಟದ ಕಲಾತಂಡಗಳು ಭಾಗವಹಿಸಲಿದೆ. ಪುತ್ತಿಗೆ ಮಠ ಪರ್ಯಾಯೋತ್ಸವ ವಿಶ್ವ ಪರ್ಯಾಯ ಆಗುವಂತೆ ಸರ್ವರ ಸಹಕಾರ ಅಗತ್ಯ ಎಂದರು.

ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಆನೆಗುಡ್ಡೆ ಸೂರ್ಯನಾರಾಯಣ ಉಪಾಧ್ಯಾಯ, ಶಾಸಕರಾದ ಯಶಪಾಲ್ ಸುವರ್ಣ, ಗುರುರಾಜ ಗಂಟಿಹೊಳೆ, ಕಿರಣ್ ಕೊಡ್ಗಿ ಮತ್ತು ಗುರ್ಮೆ ಸುರೇಶ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಹೆರಿ೦ಜೆ ಕೃಷ್ಣ ಭಟ್, ಪ್ರಧಾನ ಕಾರ್ಯದರ್ಶಿ ಬೆಳಪು ದೇವಿಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ರಂಜನ್ ಕಲ್ಕೂರ, ನಾಗೇಶ್ ಹೆಗ್ಡೆ ಇದ್ದರು.

ಕಾರ್ಯಕ್ರಮದಲ್ಲಿ ಪುತ್ತಿಗೆ ಮಠ ಆಡಳಿತಾಧಿಕಾರಿ ಪ್ರಸನ್ನ ಆಚಾರ್ಯ, ಉದ್ಯಮಿ ಸಂತೋಷ್ ಶೆಟ್ಟಿ, ಸುಪ್ರಸಾದ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಯುಗಪುರುಷ ಭುವನಾಭಿರಾಮ ಉಡುಪ, ಮೂಡುಬಿದಿರೆ ಗಣೇಶೋತ್ಸವ ಸಮಿತಿ ಅಧ್ಯಕ್ಷ ಧನಲಕ್ಷ್ಮಿ ಶ್ರೀಪತಿ ಭಟ್, ಮೂಡುಬಿದಿರೆ ಕೋ ಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್ ಇದ್ದರು.

ಮಠದ ದಿವಾನ ನಾಗರಾಜ ಆಚಾರ್ಯ ಸ್ವಾಗತಿಸಿದರು. ರಮೇಶ್ ಭಟ್ ನಿರೂಪಿಸಿ,ಪ್ರಸನ್ನ ಆಚಾರ್ಯರವರು ವ೦ದಿಸಿದರು.
ಈ ಸಂದರ್ಭದಲ್ಲಿ ಡಾ.ಹೆಗ್ಗಡೆಯವರು ಪರ್ಯಾಯ ಮಹೋತ್ಸವ ಲಾಂಛನ ಬಿಡುಗಡೆಗೊಳಿಸಿದರು.

No Comments

Leave A Comment