ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಬೆಂಗಳೂರಿನಲ್ಲಿ ಎರಡು ತಿಂಗಳಲ್ಲಿ 3,200ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣ ವರದಿ; 7 ಮಂದಿ ಸಾವು

ಬೆಂಗಳೂರು: ಕಳೆದ ಎರಡು ತಿಂಗಳಲ್ಲಿ ಬೆಂಗಳೂರಿನಲ್ಲಿ 3,200 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಗುರುವಾರ ಹೇಳಿದ್ದಾರೆ.

ಇಂದು ಡೆಂಗ್ಯೂ ಪ್ರಕರಣಗಳ ನಿಯಂತ್ರಣ ಕುರಿತು ಬಿಬಿಪಿಎಂ ಅಧಿಕಾರಿಗಳ ಜೊತೆ ಸಭೆ ನಡೆಸಿದ ಆರೋಗ್ಯ ಸಚಿವರು, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಟೆಸ್ಟಿಂಗ್ ಸ್ಯಾಂಪಲ್ಸ್ ಹೆಚ್ಚಿಸುವಂತೆ ಸೂಚಿಸಿದ್ದಾರೆ.

ಕಳೆದ ಎರಡು ತಿಂಗಳಲ್ಲಿ ಬೆಂಗಳೂರಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಾ ಹೋಗಿದೆ. ಸಿಲಿಕಾನ್ ಸಿಟಿಯಲ್ಲಿ ಶಂಕಿತ ಡೆಂಗ್ಯೂನಿಂದ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವರು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಜುಲೈ ಮತ್ತು ಆಗಸ್ಟ್‌ನಲ್ಲಿ ಕ್ರಮವಾಗಿ 1,649 ಮತ್ತು 1,590 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಸೆಪ್ಟೆಂಬರ್‌ನಲ್ಲಿ ಇದುವರೆಗೆ 416 ಪ್ರಕರಣಗಳು ವರದಿಯಾಗಿವೆ ಎಂದು ಸಚಿವರು ತಿಳಿಸಿದ್ದಾರೆ.

ಮಳೆ ನೀರು ನಿಂತಿರುವುದರಿಂದ ಪ್ರಕರಣಗಳು ಹೆಚ್ಚುತ್ತಿವೆ. ವೈರಸ್ ಹರಡುವ ಸೊಳ್ಳೆಗಳನ್ನು ಹೋಗಲಾಡಿಸಲು ಬೆಂಗಳೂರಿನಲ್ಲಿ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.

ಈ ತಿಂಗಳು ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವರು ತಿಳಿಸಿದರು.

ಸಹಾಯಕ ಶುಶ್ರೂಷಕರು ಮತ್ತು ಶುಶ್ರೂಷಕಿಯರು(ಎಎನ್‌ಎಂ) ಮತ್ತು ಮುಖ್ಯ ಆರೋಗ್ಯ ಕಾರ್ಯಕರ್ತರ ಕೊರತೆ ಕುರಿತು ಮಾತನಾಡಿದ ಸಚಿವರು, ಅವರ ವೇತನವನ್ನು ತಿಂಗಳಿಗೆ 12,000 ರೂ.ಗಳಿಂದ 18,000 ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

No Comments

Leave A Comment