ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ದೇಶದ ಅಖಂಡತೆ ಮತ್ತು ಲಿಂಗ ಸಮಾನತೆಗೆ ಏಕರೂಪ ನಾಗರಿಕ ಸಂಹಿತೆ ಅನಿವಾರ್ಯ-ಜೆ. ನಂದಕುಮಾರ್
ಉಡುಪಿ: ಒಂದು ರಾಷ್ಟ್ರದಲ್ಲಿ ಎರಡು ಕಾನೂನು ಜಾರಿಯಲ್ಲಿರುವುದು ಸಾಧ್ಯವಿಲ್ಲ ಮತ್ತು ಸಾಧುವೂ ಅಲ್ಲ. ಅದರಿಂದ ದೇಶದ ಸರ್ವಾಂಗೀಣ ಪ್ರಗತಿ ಅಸಾಧ್ಯ. ದೇಶದ ಅಖಂಡತೆ ಮತ್ತು ಲಿಂಗ ಸಮಾನತೆಗೆ ಏಕರೂಪ ನಾಗರಿಕ ಸಂಹಿತೆ ಅನಿವಾರ್ಯ ಎಂದು ನವದೆಹಲಿ ಪ್ರಜ್ಞಾ ಪ್ರವಾಹ ರಾಷ್ಟ್ರೀಯ ಸಂಯೋಜಕ ಜೆ. ನಂದಕುಮಾರ್ ಪ್ರತಿಪಾದಿಸಿದರು.
ಅದಮಾರು ಮಠ ಆಶ್ರಯದ ಶ್ರೀಕೃಷ್ಣ ಸೇವಾ ಬಳಗ ಆಶ್ರಯದಲ್ಲಿ ನಡೆಯುತ್ತಿರುವ ವಿಶ್ವಾರ್ಪಣಂ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಗುರುವಾರ ಇಲ್ಲಿನ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ ಏಕೆ ಬೇಕು? ವಿಚಾರದಲ್ಲಿ ಮಾತನಾಡಿದರು.
ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಮುಸ್ಲಿಂ ಸಹಿತ ಯಾವುದೇ ಧರ್ಮಕ್ಕೆ ಅಡ್ಡಿಯಾಗುವುದಿಲ್ಲ. ವಿವಾಹ, ವಿಚ್ಛೇದನ, ದತ್ತು ಸ್ವೀಕಾರ, ಆಸ್ತಿ ಹಂಚಿಕೆ, ವಾರೀಸುದಾರಿಕೆ ಇತ್ಯಾದಿ ವಿಚಾರಗಳನ್ನು ಸಂಹಿತೆ ಹೊಂದಿದ್ದು ಧಾರ್ಮಿಕ ಆಚರಣೆಗಳನ್ನು ಅದು ಒಳಗೊಂಡಿಲ್ಲ ಎಂದರು.
ಮುಸ್ಲಿಂ ಮಹಿಳೆಯರ ಒಲವು
1937ರ ವರೆಗೂ ಭಾರತದಲ್ಲಿ ಇಲ್ಲಿನ ಮುಸ್ಲಿಮರ ಸಹಿತ ಎಲ್ಲಾ ಧರ್ಮೀಯರೂ ವಿವಾಹ, ಆಸ್ತಿ ವಿಚಾರ ಇತ್ಯಾದಿಗಳ ಬಗ್ಗೆ ಹಿಂದೂ ಕಾಯ್ದೆಯನ್ನೇ ಅನುಸರಿಸುತ್ತಿದ್ದರು. ಭಾರತ ಸ್ವಾತಂತ್ರ್ಯಗೊಳ್ಳುವ ಕೇವಲ 10 ವರ್ಷದೊಳಗೆ ಬ್ರಿಟಿಷರು ತಮ್ಮ ಒಡೆದು ಆಳುವ ನೀತಿಯ ಭಾಗವಾಗಿ ಹಿಂದೂಗಳು ಮತ್ತು ಮುಸ್ಲಿಮರನ್ನು ವಿಭಜಿಸಿದರು. ಅದನ್ನು ರಾಷ್ಟ್ರೀಯ ಚಿಂತನೆಯ ಮುಸಲ್ಮಾನರು ವಿರೋಧಿಸಿದ್ದರು ಎಂಬುದು ಉಲ್ಲೇಖನೀಯ ಎಂದರು.
ಇಂದಿಗೂ ಮುಸ್ಲಿಂ ಮಹಿಳೆಯರು ಸಂಹಿತೆ ಅನುಷ್ಠಾನ ಬಗ್ಗೆ ಆಗ್ರಹಿಸುತ್ತಿದ್ದಾರೆ ಎಂದರು.
ಇಸ್ಲಾಂ ರಾಷ್ಟ್ರಗಳಲ್ಲಿ ಸಮಾನ ಕಾನೂನು
ಶರಿಯತ್ ಕಾಯ್ದೆ ಜಾರಿಗೊಳಿಸುವ ಮೂಲಕ ಧರ್ಮಾಂಧ ಮುಸ್ಲಿಮರನ್ನು ಓಲೈಸಿದರು. ಈಮಧ್ಯೆ ಇಕ್ಕತ್ ಕಾಯೆ ಅನುಷ್ಠಾನಗೊಳಿಸಲು ಹಿಂಜರಿದರು ಎಂದರು.
ಇಂದಿಗೂ ಮುಸ್ಲಿಂ ರಾಷ್ಟ್ರಗಳಲ್ಲಿ ಪ್ರತ್ಯೇಕ ಸಿವಿಲ್ ಸಂಹಿತೆ ಜಾರಿಯಲ್ಲಿಲ್ಲ. ಅಲ್ಲಿ ಜಾರಿ ಇಲ್ಲದ ಕಾನೂನನ್ನು ಭಾರತದಲ್ಲಿ ಮುಸಲ್ಮಾನರು ವಿರೋಧಿಸಲು ಕಾರಣವೇನು ಎಂದು ಪ್ರಶ್ನಿಸಿದ ನಂದಕುಮಾರ್, ಸಂಹಿತೆ ಬಗ್ಗೆ ಇನ್ನೂ ಕರಡು ಸಿದ್ಧವಾಗಿಲ್ಲ. ಕೇವಲ ಈ ಕುರಿತ ಚರ್ಚೆ ನಡೆಯಬೇಕು ಎಂಬ ಪ್ರಧಾನಿ ಮೋದಿ ಮಾತಿನ ಕುರಿತೇ ದೇಶವ್ಯಾಪಿ ಚರ್ಚೆಗಳಾಗುತ್ತಿದೆ.
ಅದರ ಹಿಂದಿನ ಷಡ್ಯಂತ್ರ ಏನೆಂಬುದೂ ಗೊತ್ತಿದೆ ಎಂದರು.
ಸನ್ಯಾಸಿಗಳಿಂದ ದೇಶಕ್ಕೆ ಮಾರ್ಗದರ್ಶನ
ಭಾರತೀಯ ಸಂಸ್ಕೃತಿಗೆ ಧಕ್ಕೆ ಬಂದಾಗ ಆಚಾರ್ಯ ಶಂಕರರು ದೇಶವನ್ನು ವೇದದ ತಳಹದಿಯಲ್ಲಿ ಒಂದುಗೂಡಿಸಿದರು. ಶೃಂಗೇರಿ ಮಠ ಪರಂಪರೆಯ ಶ್ರೀ ವಿದ್ಯಾರಣ್ಯರು ವಿಜಯನಗರ ಸ್ಥಾಪಿಸಿದರು. ಸಮರ್ಥ ರಾಮದಾಸರು ಛತ್ರಪತಿ ಶಿವಾಜಿ ಮೂಲಕ ದೇಶ ರಕ್ಷಿಸಿದರು.
ಈ ನಿಟ್ಟಿನಲ್ಲಿ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಜನತೆಗೆ ತಿಳಿಸಲು ಉಪಕ್ರಮಿಸಿರುವ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅಭಿನಂದನಾರ್ಹರು ಎಂದು ನಂದಕುಮಾರ್ ಹೇಳಿದರು.
ಅಡ್ಡಗೋಡೆ ಮೇಲೆ ದೀಪ ಬೇಡ:-
ಸಾನ್ನಿಧ್ಯ ವಹಿಸಿದ್ದ ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ವೇದಗಳಲ್ಲೇ ಸಮಾನ ನೀತಿ ಸಂಹಿತೆ ಜಾರಿ ಬಗ್ಗೆ ಉಲ್ಲೇಖಿಸಲಾಗಿದೆ. ಕ್ರಿಮಿನಲ್ ಕಾಯ್ದೆಯನ್ನು ಸಮಾನವಾಗಿ ಸ್ವೀಕರಿಸುವವರು ಸಿವಿಲ್ ಕಾಯ್ದೆ ವಿರೋಧಿಸುವ ಹಿಂದಿನ ಉದ್ದೇಶವೇನು? ಒಂದೋ ಕ್ರಿಮಿನಲ್ ಕಾಯ್ದೆ ಜೊತೆಗೆ ಸಿವಿಲ್ ಕಾಯ್ದೆ ಸ್ವೀಕರಿಸಿ, ಇಲ್ಲವಾದಲ್ಲಿ ಕ್ರಿಮಿನಲ್ ಕಾಯ್ದೆಯನ್ನೂ ವಿರೋಧಿಸಿ. ಅಡ್ಡಗೋಡೆಯ ಮೇಲಿನ ದೀಪ ಬೇಡ ಎಂದರು.
ಶಿಕ್ಷಣ ಮತ್ತು ಉದ್ಯೋಗದಲ್ಲಿ ಜಾತಿ ಆಧರಿತ ಮೀಸಲಾತಿ ಬದಲಾಗಿ ಮೆರಿಟ್ ಜಾರಿಗೊಳಿಸಬೇಕು ಎಂದವರು ಆಗ್ರಹಿಸಿದರು.
ಅಂದು ಕ್ವಿಟ್ ಇಂಡಿಯಾ, ಇಂದು I.N.D.I.A. ಕ್ವಿಟ್ ಆಗಲಿ
ಸ್ವಾತಂತ್ರ್ಯ ಪೂರ್ವದಲ್ಲಿ ದೇಶಪ್ರೇಮಿ ಭಾರತೀಯರು ಕ್ವಿಟ್ ಇಂಡಿಯಾ ಎಂದರು. ಇಂದು ದೇಶ ಪ್ರೀತಿಸದ I.N.D.I.A ಕ್ವಿಟ್ ಎನ್ನಬೇಕಾಗಿದೆ ಎಂದು ಅದಮಾರು ಶ್ರೀಗಳು ಹೇಳಿದರು.
ಶ್ರೀಕೃಷ್ಣ ಸೇವಾ ಬಳಗ ಸಂಚಾಲಕ ಹಾಗೂ ಅದಮಾರು ಮಠ ಕಾರ್ಯನಿರ್ವಾಹಕ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು. ಮಣಿಪಾಲ ಎಂಐಟಿ ಸಹಪ್ರಾಧ್ಯಾಪಕ ಡಾ| ನಂದನ ಪ್ರಭು ಪರಿಚಯಿಸಿದರು. ಬಳಗ ಸದಸ್ಯ ಗಣೇಶ ಹೆಬ್ಬಾರ್ ವಂದಿಸಿದರು. ಸಂಸ್ಕೃತ ಉಪನ್ಯಾಸಕ ಡಾ. ಟಿ. ಎಸ್. ರಮೇಶ ಭಟ್ ನಿರೂಪಿಸಿದರು.ಬಳಿಕ ಸಂವಾದ, ಪ್ರಶ್ನೋತ್ತರ ನಡೆಯಿತು.