ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಲೋಕಸಭೆಯಲ್ಲಿ ರಾಹುಲ್ ಗಾಂಧಿ ‘ಫ್ಲೈಯಿಂಗ್ ಕಿಸ್’ಗೆ ಸ್ಮೃತಿ ಇರಾನಿ ಆಕ್ಷೇಪ

ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ರಾಹುಲ್ ಗಾಂಧಿ ಅವರ ‘ಫ್ಲೈಯಿಂಗ್ ಕಿಸ್’ಗೆ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಸ್ಮೃತಿ ಇರಾನಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇಂತಹ ಅಸಭ್ಯತೆಯನ್ನು ಸಂಸತ್ತು ಹಿಂದೆಂದೂ ಕಂಡಿರಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವಿಶ್ವಾಸ ನಿರ್ಣಯದ ಕುರಿತು ರಾಹುಲ್ ಗಾಂಧಿ ಭಾಷಣ ಮುಕ್ತಾಯಗೊಳಿಸಿದ ನಂತರ ಮಾತನಾಡಿದ ಸ್ಮೃತಿ ಇರಾನಿ ಅವರು, “ಕೆಲವರ ವರ್ತನೆಯನ್ನು ನಾನು ಆಕ್ಷೇಪಿಸುತ್ತೇನೆ. ನನಗಿಂತ ಮುಂಚೆ ಮಾತನಾಡಿದ ವ್ಯಕ್ತಿ, ಹೊರಡುವ ಮುನ್ನ ಅಸಭ್ಯತೆಯನ್ನು ಪ್ರದರ್ಶಿಸಿದರು.  ಸ್ತ್ರೀದ್ವೇಷಿ ಪುರುಷನೊಬ್ಬನಿಂದ ಮಾತ್ರ ಮಹಿಳೆಯರು ಹಾಜರಿರುವ ಸದನಕ್ಕೆ ಫ್ಲೈಯಿಂಗ್ ಕಿಸ್ ಮಾಡಲು ಸಾಧ್ಯ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಮಹಿಳಾ ಸಂಸದೆಯೊಬ್ಬರ ಕಡೆಗೆ ನೋಡುತ್ತಾ ‘ಫ್ಲೈಯಿಂಗ್ ಕಿಸ್’ ಮಾಡುವ ಈ ವರ್ತನೆಗೆ ಏನು ಹೇಳಬೇಕು ಎಂದು ಸ್ಮೃತಿ ಇರಾನಿ ಅವರು ಪ್ರಶ್ನಿಸಿದರು. ಅವರ ಈ ವರ್ತನೆಯನ್ನು ಗಮನಿಸಿದರೆ ಅವರು ಯಾವ ವಂಶದಿಂದ ಬಂದವರು ಅನ್ನೋದು ಗೊತ್ತಾಗುತ್ತದೆ. ಅವರ ಕುಟುಂಬ ಹಾಗೂ ಅವರ ಪಕ್ಷ ಮಹಿಳೆಯರನ್ನು ಯಾವ ರೀತಿ ನೋಡುತ್ತದೆ ಅನ್ನೋದು ರಾಹುಲ್ ಗಾಂಧಿ ಅವರ ವರ್ತನೆಯಿಂದಲೇ ಸಾಬೀತಾಗುತ್ತೆ ಎಂದು ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದರು.

ಇನ್ನು ಮಣಿಪುರ ವಿಚಾರಕ್ಕೆ ಸಂಬಂಧಿಸಿದಂತೆ “ಮಣಿಪುರದಲ್ಲಿ ಭಾರತ ಮಾತೆಯ ಕೊಲೆ”ಯಾಗಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಸ್ಮೃತಿ ಇರಾನಿ, ಸಂಸತ್ತಿನಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ ಎಂದು ಸಂಸದರೊಬ್ಬರು ಮಾತನಾಡಿದ್ದು ಇದೇ ಮೊದಲು. ಈ ರೀತಿಯ ಹೇಳಿಕೆ ನೀಡುವಾಗ ಕಾಂಗ್ರೆಸ್ ಸದಸ್ಯರು ಮೇಜು ಕುಟ್ಟುತ್ತಿದ್ದರು ಎಂದು ಸ್ಮೃತಿ ಇರಾನಿ ಕಿಡಿ ಕಾರಿದರು.

ರಾಹುಲ್ ಗಾಂಧಿ ಅವರ ಭಾಷಣದ ಬಳಿಕ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಭಾಷಣ ನಿಗದಿಯಾಗಿತ್ತು. ತಮ್ಮ ಭಾಷಣ ಮುಗಿಸಿ ಲೋಕಸಭೆಯಿಂದ ಹೊರ ನಡೆಯುವ ಮುನ್ನ ರಾಹುಲ್ ಗಾಂಧಿ ಅವರು ಸ್ಮೃತಿ ಇರಾನಿ ಅವರ ಕಡೆಗೆ ನೋಡುತ್ತಾ ‘ಫ್ಲೈಯಿಂಗ್ ಕಿಸ್’ ಕೊಟ್ಟರು ಎನ್ನಲಾಗಿದೆ.

No Comments

Leave A Comment