ಬುಲ್ದಾನ (ಮಹರಾಷ್ಟ್ರ): ಎರಡು ಬಸ್’ಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 6 ಮಂದಿ ಸಾವನ್ನಪ್ಪಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮುಂಬೈ ನಾಗ್ಪುರ ಹೆದ್ದಾರಿಯ ಲಕ್ಷ್ಮಿ ನಗರ ಮಲ್ಕಾಪುರ ಬಳಿಯ ಮೇಲ್ಸೇವೆಯಲ್ಲಿ ಶನಿವಾರ ನಡೆದಿದೆ.
ಅಪಘಾತವಾದ ಬಸ್ ಟ್ರಾವೆಲ್ಸ್ ಸಂಖ್ಯೆ MH 08. 9458 ಆಗಿದ್ದು, ಅಮರನಾಥ ತೀರ್ಥಯಾತ್ರೆಯಿಂದ ಹಿಂತಿರುಗಿ ಹಿಂಗೋಲಿಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
ಈ ಬಸ್ನಲ್ಲಿ ಒಟ್ಟು 35 ರಿಂದ 40 ಯಾತ್ರಿಗಳಿದ್ದರು ಎನ್ನಲಾಗಿದೆ. ಮತ್ತೊಂದು ಬಸ್ ಟ್ರಾವೆಲ್ಸ್ ಸಂಖ್ಯೆ MH 27 BX 4466 ಆಗಿದ್ದು, ಈ ಬಸ್ ನಾಗ್ಪುರದಿಂದ ನಾಸಿಕ್ ಕಡೆಗೆ ಪ್ರಯಾಣಿಸುತ್ತಿದ್ದು, ಅಪಘಾತದ ಸಂದರ್ಭದಲ್ಲಿ 25 ರಿಂದ 30 ಪ್ರಯಾಣಿಕರಿದ್ದರು ಎಂದು ಹೇಳಲಾಗುತ್ತಿದೆ.
ಈ ಎರಡು ಬಸ್ಗಳು ಮಲ್ಕಾಪುರ ನಗರದ ಮೂಲಕ ಹಾದು ಹೋಗುವ ಹೆದ್ದಾರಿ ಸಂಖ್ಯೆ 6ರಲ್ಲಿ ಮುಖಾಮುಖಿ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ 2 ಬಸ್ಗಳು ನಜ್ಜುಗುಜ್ಜಾಗಿವೆ. ಜೊತೆಗೆ ಆರು ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಎರಡೂ ಟ್ರಾವೆಲ್ಸ್‌ನಲ್ಲಿದ್ದ ಪ್ರಯಾಣಿಕರು ಸೇರಿ 20ಕ್ಕೂ ಮಂದಿ ಗಾಯಗೊಂಡಿದ್ದಾರೆ.
ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಬುಲ್ದಾನಾಗೆ ಸ್ಥಳಾಂತರಿಸಲಾಗಿದೆ. ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.