
ಮಣಿಪುರ ಹಿಂಸಾಚಾರ: 30 ಮನೆಗಳಿಗೆ, ಭದ್ರತಾ ಪಡೆಗಳು ಬಳಸುತ್ತಿದ್ದ ಬಸ್ಸುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಇಂಫಾಲ: ಗಲಭೆ ಪೀಡಿತ ಮಣಿಪುರದಲ್ಲಿ ಹೊಸ ಹಿಂಸಾಚಾರ ಪ್ರಕರಣ ವರದಿಯಾಗಿದ್ದು, ಸುಮಾರು 2,000 ಮಂದಿಯಿದ್ದ ಜನರ ಗುಂಪೊಂದು ಬುಧವಾರ ಬೆಳಿಗ್ಗೆ ಭಾರತ-ಮ್ಯಾನ್ಮಾರ್ ಗಡಿ ಪಟ್ಟಣವಾದ ಮೊರೆಹ್‌ನಲ್ಲಿ ಸುಮಾರು 30 ಮನೆಗಳನ್ನು ಸುಟ್ಟುಹಾಕಿದೆ ಮತ್ತು ಇತರ ನಾಲ್ಕು ಮನೆಗಳನ್ನು ಕೆಡವಿದೆ.0
ಬಹಳಷ್ಟು ಮಹಿಳೆಯರೇ ಇದ್ದ ಗುಂಪು ಬೆಳಗ್ಗೆ 10 ಗಂಟೆ ಸುಮಾರಿಗೆ ಮೊರೆಹ್ ಬಜಾರ್ ಪ್ರದೇಶದಲ್ಲಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಈ ವೇಳೆ ಭದ್ರತಾ ಸಿಬ್ಬಂದಿ ಸ್ಥಳದಲ್ಲಿದ್ದರು. ಆದರೆ, ಅವರು ಮೂಕ ಪ್ರೇಕ್ಷಕರಾಗಿದ್ದರು. ಮೇ 3 ರಂದು ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಸ್ಥಳವನ್ನು ತೊರೆದ ಮೇಟಿ ಸಮುದಾಯಕ್ಕೆ ಸೇರಿದ ಮನೆಗಳು ಇವಾಗಿವೆ.
ಮೊರೆಹ್ ವಿವಿಧ ಸಮುದಾಯಗಳ ಜನಸಂಖ್ಯೆಯನ್ನು ಹೊಂದಿದ್ದು, ಕುಕಿಗಳು, ಮೇಟಿಗಳು, ತಮಿಳರು, ಗೂರ್ಖಾಗಳು, ಬೆಂಗಾಲಿಗಳು, ಪಂಜಾಬಿ ಸೇರಿದಂತೆ ಇತರೆ ಸಮುದಾಯಗಳು ವಾಸವಾಗಿವೆ.