``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಗಾಂಧಿಯವರನ್ನು ಕೊಂದ ಗೋಡ್ಸೆ ವಂಶದವರು ಇಂದು ಗಾಂಧಿ ಪ್ರತಿಮೆ ಮುಂದೆ ನಿಂತು ಪ್ರತಿಭಟನೆ ಮಾಡುತ್ತಿರುವುದು ವಿಪರ್ಯಾಸ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಮುಂಗಾರು ಬಜೆಟ್ ಅಧಿವೇಶನದ ಕೊನೆಯ ದಿನವಾದ ಇಂದು ಶುಕ್ರವಾರ ಸಿಎಂ ಸಿದ್ದರಾಮಯ್ಯ ವಿಧಾನ ಪರಿಷತ್ತಿನಲ್ಲಿ ಬಜೆಟ್ ಮಂಡನೆ ಮೇಲಿನ ಚರ್ಚೆಗೆ ಉತ್ತರಿಸಿದರು.

ಈ ವೇಳೆ 10 ಮಂದಿ ಬಿಜೆಪಿ ಶಾಸಕರ ಅಮಾನತು ಖಂಡಿಸಿ ಬಿಜೆಪಿಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಕೊನೆಯ ದಿನವಾದ ಇಂದು ಕೂಡ ಕಲಾಪ ಬಹಿಷ್ಕರಿಸಿ ವಿಧಾನಸೌಧ ಆವರಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. ಅವರಿಗೆ ಜೆಡಿಎಸ್ ಶಾಸಕರು ಕೂಡ ಸಾಥ್ ನೀಡಿದರು.

ಈ ವೇಳೆ ಪರಿಷತ್ತಿನಲ್ಲಿಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ನಾಯಕರು ಗೋಡ್ಸೆ ಪ್ರತಿಮೆ ಮುಂದೆ ಧರಣಿ ಮಾಡಬೇಕಿತ್ತು. ಗಾಂಧಿ ಕೊಂದವರ ವಂಶದವರು ಅವರ ಪ್ರತಿಮೆ ಮುಂದೆ ಧರಣಿ ಮಾಡುತ್ತಿರುವುದು ವಿಪರ್ಯಾಸವೇ ಸರಿ, ಅವರು ನ್ಯಾಯಯುತವಾಗಿ ನಾಥೂರಾಮ್ ಗೋಡ್ಸೆ ಪ್ರತಿಮೆ ಮುಂದೆ ಕುಳಿತುಕೊಳ್ಳಬೇಕು ಎಂದು ಟೀಕಿಸಿದರು.

ಬಿಜೆಪಿಯವರು ಬರೀ ಸುಳ್ಳು ಹೇಳೋದು, ಘರ್ಷಣೆ ಉಂಟು ಮಾಡುವವರು, ಸಮಾಜ ಒಡೆಯುವವರು ಈಗ ಹೋಗಿ ಗಾಂಧಿ ಮುಂದೆ ಕೂತಿದ್ದಾರೆ. ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಲು ಇವರಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.

ನನ್ನ ರಾಜಕೀಯ ಜೀವನದಲ್ಲಿ ಇದೇ ಮೊದಲು: ನನ್ನ ರಾಜಕೀಯ ಜೀವನದಲ್ಲಿ ಇದುವರೆಗೆ 14 ಬಾರಿ ಬಜೆಟ್ ಮಂಡಿಸಿದ್ದೇನೆ. ನನ್ನ ಬಜೆಟ್ ಮಂಡನೆ ಇತಿಹಾಸದಲ್ಲಿ ವಿಪಕ್ಷದವರು ಇಲ್ಲದೆಯೇ ಇಂದು ಸದನದಲ್ಲಿ ಉತ್ತರ ನೀಡುತ್ತಿದ್ದೇನೆ. ಒಂದು ಸರ್ಕಾರದಲ್ಲಿ ಸಮರ್ಥ ವಿಪಕ್ಷದವರು ಇರಬೇಕು, ಸರ್ಕಾರದ ಕೆಲಸಗಳನ್ನು ಪ್ರಶ್ನಿಸುವವರು, ಗಮನಿಸುವವರು, ಟೀಕಿಸುವ ಸಮರ್ಥ ವಿರೋಧ ಪಕ್ಷದವರು ಇರಬೇಕಾಗುತ್ತದೆ. ಆದರೆ ಇಂದು ಎರಡೂ ಸದನಗಳ ಕಲಾಪವನ್ನು ವಿಪಕ್ಷದವರು ಬಹಿಷ್ಕಾರ ಮಾಡಿದ್ದು ಖಂಡನೀಯ, ಇದು ಬಿಜೆಪಿ ಮತ್ತು ಜೆಡಿಎಸ್ ನ ಜನವಿರೋಧಿ,ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದರು.

ಸದನದಲ್ಲಿ ಅಗೌರವ ತೋರಿಸಬಾರದು: ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿ ಸದನದ ಬಾವಿಗಿಳಿಯುವುದು, ಪ್ರತಿಭಟನೆ ಮಾಡುವುದು ವಿರೋಧ ಪಕ್ಷದವರ ಹಕ್ಕು, ಹಾಗೆಂದು ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿಸುವುದು, ಅನುಚಿತ ವರ್ತನೆ ಸರಿಯಲ್ಲ. ಅಗೌರವ, ಅನಾಗರಿಕ ರೀತಿಯಲ್ಲಿ ವರ್ತಿಸಿದ್ದಕ್ಕೆ ಅಮಾನತು ಮಾಡಲಾಗಿದೆ. ಅಲ್ಲಿ ಮಾರ್ಷಲ್ ಗಳು ಬರದಿದ್ದರೆ ಪರಿಸ್ಥಿತಿ ಬೇರೆಯದೇ ಆಗುತ್ತಿತ್ತೇನೋ ಎಂದು ಸಿಎಂ ಹೇಳಿದ್ದಾರೆ.

ಬಜೆಟ್ ಮೇಲೆ ಚರ್ಚೆ ನಡೆಯಬೇಕಿತ್ತು: ಇಂದು ಬಜೆಟ್ ಮಂಡನೆ ಮೇಲೆ ಸದನದಲ್ಲಿ ಚರ್ಚೆ ನಡೆಯಬೇಕಿತ್ತು, ಆದರೆ ಹಾಗಾಗಲಿಲ್ಲ. ಜೆಡಿಎಸ್ ನವರು ಏಕೆ ಸದನ ಕಲಾಪ ಬಹಿಷ್ಕರಿಸಿದರು? ಅವರು ಹಾಜರಾಗಬೇಕಿತ್ತಲ್ಲವೇ, ಬಜೆಟ್ ಮೇಲೆ ಕೇವಲ ಇಬ್ಬರೇ ವಿಪಕ್ಷ ನಾಯಕರು ಚರ್ಚಿಸಿದ್ದಾರೆ, ಇದಕ್ಕೆ ಏನು ಹೇಳಬೇಕು, ವಿರೋಧ ಪಕ್ಷದವರಿಗೆ ಜನರ ಬಗ್ಗೆ ಕಾಳಜಿಯಿಲ್ಲ ಎಂದು ಸ್ಪಷ್ಟವಾಗಿ ತೋರಿಸುತ್ತದೆ ಎಂದರು.

No Comments

Leave A Comment