
ಬಂಧಿತ ಐವರು ಶಂಕಿತ ಉಗ್ರರು ಬೆಂಗಳೂರು ಸಿಟಿಯನ್ನು ಧ್ವಂಸಗೊಳಿಸಲು ಸಂಚು ರೂಪಿಸಿದ್ದರು: ಮಾಹಿತಿ ಬಿಚ್ಚಿಟ್ಟ ನಗರ ಪೊಲೀಸ್ ಆಯುಕ್ತರು
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗರನ್ನು ಬುಧವಾರ ಬೆಳ್ಳಂಬೆಳಗ್ಗೆ ಆಘಾತಕಾರಿ ಸುದ್ದಿಯೊಂದು ಬೆಚ್ಚಿಬೀಳಿಸಿದೆ. ನಿಖರ ಮಾಹಿತಿ ಪಡೆದು ನಗರ ಅಪರಾಧ ವಿಭಾಗ ಪೊಲೀಸರು(City crime branch) ಐವರು ಶಂಕಿತ ಉಗ್ರರನ್ನು ಬಂಧಿಸಿದ್ದು ಒಬ್ಬ ಜೈಲಿನಲ್ಲಿದ್ದರೆ ಮಾಸ್ಟರ್ ಮೈಂಡ್ ತಲೆಮರೆಸಿಕೊಂಡಿದ್ದಾನೆ.
ಇದರಿಂದ ಬೆಂಗಳೂರಿನಲ್ಲಿ ಸಂಭವಿಸಬಹುದಾಗಿದ್ದ ಭಾರೀ ದುರಂತವನ್ನು ತಪ್ಪಿಸಲಾಗಿದೆ. ಬಂಧಿತರಿಂದ ಏಳು ಪಿಸ್ತೂಲ್ 45 ಮದ್ದು ಗುಂಡುಗಳು, ಹನ್ನೆರಡು ಬೇಸಿಕ್ ಸೆಟ್ ಮೊಬೈಲ್ ಫೋನ್, ಡ್ರ್ಯ್ಯಾಗರ್, ವಾಕಿ ಟಾಕಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತರು ಬೆಂಗಳೂರು ನಗರದಲ್ಲಿ ಕೃತ್ಯವೆಸಗಲು ಪ್ಲ್ಯಾನ್ ಮಾಡಿದ್ದರು. ವಿದೇಶದಿಂದ ವಿಧ್ವಂಸಕ ಕೃತ್ಯ್ಕಕೆ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ಇಂಚಿಂಚು ಮಾಹಿತಿಯನ್ನು ಇಂದು ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಬಿಚ್ಚಿಟ್ಟರು. ಅಪಾರ ಪ್ರಮಾಣದ ಸ್ಫೋಟಕಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ 5 ಶಂಕಿತ ಉಗ್ರರನ್ನು ಬಂಧಿಸಿದೆ. ಅವರನ್ನು ಸೈಯದ್ ಸುಹೇಲ್, ಉಮರ್, ಜಾನಿದ್, ಮುದಾಸಿರ್ ಮತ್ತು ಜಾಹಿದ್ ಎಂದು ಗುರುತಿಸಲಾಗಿದ್ದು, ಈ ತಂಡ ಬೆಂಗಳೂರಿನಲ್ಲಿ ಸ್ಫೋಟ ನಡೆಸಲು ಯೋಜನೆ ರೂಪಿಸಿತ್ತು ಎಂದು ಶಂಕಿಸಲಾಗಿದೆ. ಈ ಐವರೂ 2017ರ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಅವರು ಉಗ್ರರ ಸಂಪರ್ಕಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ದಯಾನಂದ ಸುದ್ದಿಗಾರರಿಗೆ ತಿಳಿಸಿದರು.
2008ರಲ್ಲಿ ನಡೆದಿದ್ದ ಸೀರಿಯಲ್ ಸ್ಫೋಟ ಆರೋಪಿ ನಸೀರ್ ಸಂಚು ರೂಪಿಸಿದ್ದ. ಟಿ.ನಸೀರ್ ಹಾಗೂ ಜುನೈದ್ ಈ ಪ್ರಕರಣದ ಮಾಸ್ಟರ್ ಮೈಂಡ್ಗಳಾಗಿದ್ದು, ಸದ್ಯ ಟಿ.ನಸೀರ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದು, ಪ್ರಮುಖ ಲೀಡರ್ ಜುಲೈನ್ ತಲೆಮರೆಸಿಕೊಂಡಿದ್ದಾನೆ.