``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಚಾಲಕ ಜಗದೀಶ್ ಹೊತ್ತೊಯ್ಯುತ್ತಿದ್ದ ಆ್ಯಂಬುಲೆನ್ಸ್ ತಡೆದ ಜೆಡಿಎಸ್ ಮಾಜಿ ಶಾಸಕ: ಸಿಸಿಟಿವಿ ದೃಶ್ಯಾವಳಿಗಳಿಂದ ಬಹಿರಂಗ!

ಮಂಡ್ಯ: ಆತ್ಮಹತ್ಯೆಗೆ ಯತ್ನಿಸಿದ್ದ, ಸಾರಿಗೆ ಸಂಸ್ಥೆಯ ನಾಗಮಂಗಲ ಡಿಪೊ ಚಾಲಕ ಎಚ್‌.ಆರ್‌.ಜಗದೀಶ್‌ ಅವರನ್ನು ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯುವಾಗ ಜೆಡಿಎಸ್‌ ಮುಖಂಡ, ಮಾಜಿ ಶಾಸಕ ಸುರೇಶ್‌ಗೌಡ ಅವರು, ಆಂಬುಲೆನ್ಸ್‌ ತಡೆದಿದ್ದಾರೆ ಎನ್ನಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವರ್ಗಾವಣೆಯಿಂದ ಮನನೊಂದು ಕೀಟನಾಶಕ ಸೇವಿಸಿ ಕೆಎಸ್‌ಆರ್‌ಟಿಸಿ ಚಾಲಕ ಜಗದೀಶ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಅವರನ್ನು ಮೈಸೂರಿಗೆ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಅನ್ನು ನಾಗಮಂಗಲ ಜೆಡಿಎಸ್ ಮಾಜಿ ಶಾಸಕ ಕೆ.ಸುರೇಶ್ ಗೌಡ ತಡೆದಿದ್ದರು ಎಂದು ಹೇಳಲಾಗುತ್ತಿದೆ.

ಈ ಕುರಿತ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು, ಸುರೇಶ್ ಗೌಡ ವಿರುದ್ಧ ಕಿಡಿಕಾರಿದರು.

ಮದ್ದೂರು ಡಿಪೋಗೆ ವರ್ಗಾವಣೆಗೊಂಡಿದ್ದರಿಂದ ಮನನೊಂದ ಜಗದೀಶ್ ನಾಗಮಂಗಲ ಡಿಪೋದಲ್ಲಿ ವಿಷ ಸೇವಿಸಿದ್ದರು. ಕೂಡಲೇ ಅವರನ್ನು ಬಿ.ಜಿ.ನಗರ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸ್ಥಳಾಂತರ ಮಾಡಲಾಗುತ್ತಿತ್ತು.

ಈ ವೇಳೆ ನಾಗಮಂಗಲದ ಟಿಬಿ ಲೇಔಟ್‌ನಲ್ಲಿರುವ ಬಿಜಿಎಸ್ ಸರ್ಕಲ್‌ನಲ್ಲಿ ಬೆಳಗಿನ ಜಾವ 1.09ರ ಸುಮಾರಿಗೆ  ಸುರೇಶ್ ಗೌಡ ಮತ್ತು ಅವರ ಬೆಂಬಲಿಗರು ಆಂಬ್ಯುಲೆನ್ಸ್ ಅನ್ನು ತಡೆದು ನಿಲ್ಲಿಸಿದ್ದು, ಈ ಕುರಿತ ವಿಡಿಯೋ ಸರ್ಕಲ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲು ವೈರಲ್ ಆಗಿದೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸುರೇಶ್ ಗೌಡ ಅವರು, ಹಲವು ವರ್ಷಗಳಿಂದ ಜಗದೀಶ್ ಅವರು ಪರಿಚಯವಿದ್ದರು. ಅವರ ಆರೋಗ್ಯ ಸ್ಥಿತಿ ತಿಳಿಯಲು ಆಂಬ್ಯುಲೆನ್ಸ್ ನಿಲ್ಲಿಸಿದ್ದೆ ಎಂದು ಹೇಳಿದ್ದಾರೆ.

ಇದೇ ವೇಳೆ ಸಕಾಲದಲ್ಲಿ ಚಿಕಿತ್ಸೆ ಸಿಗದಂತೆ ಮಾಡಲು ಆ್ಯಂಬುಲೆನ್ಸ್ ತಡೆಯಲಾಗಿತ್ತು ಎಂಬ ಆರೋಪವನ್ನು ನಿರಾಕರಿಸಿದ ಅವರು, ಆರೋಪ ಸಾಬೀತಾದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆಂದು ತಿಳಿಸಿದ್ದಾರೆ.

ಜುಲೈ 5 ರಂದು ಚಾಲಕ ಜಗದೀಶ್ ಅವರು ಡಿಪೋದಲ್ಲಿ ವಿಷ ಸೇವಿಸಿದ್ದರು. ವರ್ಗಾವಣೆಗೆ ಚಲುವರಾಯಸ್ವಾಮಿಯೇ ಕಾರಣ ಎಂದು ಡೆತ್ ನೋಟ್‌ನಲ್ಲಿ ಹೇಳಿಕೊಂಡಿದ್ದರು.

ಘಟನೆ ಸಂಬಂಧ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಈ ನಡುವೆ ಸಚಿವ ಚಲುವರಾಯಸ್ವಾಮಿ ಕೂಡ ತನಿಖೆಗೆ ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿತ್ತು.

ಐಜಿಪಿ ಪ್ರವೀಣ್ ಮಧುಕರ ಪವಾರ್ ನೇತೃತ್ವದ ಸಿಐಡಿ ತಂಡ ಮಂಗಳವಾರ ತನಿಖೆಯ ಅಂಗವಾಗಿ ಪಟ್ಟಣದ ಹಲವೆಡೆ ಭೇಟಿ ನೀಡಿತು.

ಈ ವೇಳೆ ಮಂಡ್ಯ ಎಸ್ಪಿ ಎನ್.ಯತೀಶ್ ಮತ್ತು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು ಅವರಿಂದ ಮಾಹಿತಿ ಸಂಗ್ರಹಿಸಿದರು. ನಂತರ ಜಗದೀಶ್ ಚಿಕಿತ್ಸೆ ಪಡೆಯುತ್ತಿರುವ ಮೈಸೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಹೇಳಿಕೆ ದಾಖಲಿಸಿಕೊಂಡರು.

No Comments

Leave A Comment