ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​

ಯಮುನಾ ನದಿ ನೀರಿನ ಮಟ್ಟ ಏರಿಕೆ; ಪ್ರವಾಹ ಭೀತಿ, ದೆಹಲಿಯಲ್ಲಿ ಕಟ್ಟೆಚ್ಚರ

ನವದೆಹಲಿ: ಉತ್ತರ ಭಾರತದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ದೆಹಲಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಯಮುನಾ ನದಿ ಉಕ್ಕಿ ಹರಿಯುತ್ತಿದ್ದು,  ಪ್ರವಾಹ ಭೀತಿ ಹಿನ್ನಲೆಯಲ್ಲಿ ದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಯಮುನಾ ನದಿ ನೀರಿನ ಮಟ್ಟ 206.24 ಮೀಟರ್‌ಗೆ ಏರಿಕೆಯಾಗಿದ್ದು, ಯಮುನಾ ನದಿ ನೀರಿನ  ಗರಿಷ್ಠ ಮಟ್ಟ 207.49 ಮೀಟರ್ ಆಗಿದೆ. ಅಪಾಯಕಾರಿ ಮಟ್ಟ ತಲುಪಿದೆ. ಹೀಗಾಗಿ ದೆಹಲಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹಳೆ ರೈಲ್ವೆ ಸೇತುವೆ ಮೇಲೆ ರೈಲು ಸಂಚಾರ ಮತ್ತು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ತಿಳಿಸಿದೆ.

ಪ್ರವಾಹ ಪರಿಸ್ಥಿತಿ ಇಲ್ಲ: ಸಿಎಂ ಕೇಜ್ರಿವಾಲ್ ಸ್ಪಷ್ಟನೆ
ಇನ್ನು ದೆಹಲಿಯಲ್ಲಿ ಸದ್ಯದ ಮಟ್ಟಿಗೆ ಪ್ರವಾಹ ಪರಿಸ್ಥಿತಿ ಇಲ್ಲ ಎಂದು ಹೇಳಿರುವ ಸಿಎಂ ಕೇಜ್ರಿವಾಲ್ ಅವರು, ‘ತಜ್ಞರ ಪ್ರಕಾರ ಪ್ರವಾಹ ಪರಿಸ್ಥಿತಿ ಇಲ್ಲ. ಒಂದು ವೇಳೆ ಅಂತಹ ಸ್ಥಿತಿ ಎದುರಾದರೆ ಸನ್ನದ್ಧರಾಗಿದ್ದೇವೆ. ನೀರಿನ ಮಟ್ಟ 206 ಮೀಟರ್‌ಗೆ ಏರಿಕೆಯಾದರೆ, ಜನರನ್ನು ಸ್ಥಳಾಂತರಿಸುವ ಕಾರ್ಯ ಆರಂಭಿಸುತ್ತೇವೆ. ನದಿ ತೀರದಲ್ಲಿ ವಾಸಿಸುವ 41 ಸಾವಿರ ಜನರನ್ನು ಗುರುತಿಸಲಾಗಿದ್ದು, ಅವರಿಗಾಗಿ ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ. ಅಂತೆಯೇ ಸಿಡಬ್ಲ್ಯುಸಿ ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ’ ಹೇಳಿದ್ದಾರೆ.

ಯಮುನಾ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ
ಜುಲೈ 9ರಂದು 45 ಸಾವಿರ ಕ್ಯುಸೆಕ್‌ ನೀರನ್ನು ಹಥಿನಿಕುಂಡ್‌ ಬ್ಯಾರೇಜ್‌ನಿಂದ ಯಮುನಾ ನದಿಗೆ ಹರಿಬಿಡಲಾಗಿತ್ತು. ಕಳೆದ (ಜು.10 ಸೋಮವಾರ) ರಾತ್ರಿ ಹೆಚ್ಚುವರಿಯಾಗಿ 3 ಲಕ್ಷ ಮತ್ತು ಇಂದು ಬೆಳಗ್ಗೆ 2.5 ಲಕ್ಷ ಕ್ಯೂಸೆಕ್‌ ನೀರನ್ನು ಬಿಡುಗಡೆ ಮಾಡಲಾಗಿದೆ. ಇದೇ ಬ್ಯಾರೇಜ್‌ನಿಂದ 1978ರಲ್ಲಿ 3.21 ಲಕ್ಷ ಕ್ಯೂಸೆಕ್‌ ನೀರನ್ನು ಹೊರಬಿಟ್ಟ ಪರಿಣಾಮ ಯಮುನಾ ನದಿ ನೀರಿನ ಮಟ್ಟ 207.49ಕ್ಕೆ ತಲುಪಿತ್ತು. ಅದರಿಂದ ಉಂಟಾಗಿದ್ದ ಪ್ರವಾಹಕ್ಕೆ ದೆಹಲಿ ಸಾಕ್ಷಿಯಾಗಿತ್ತು.

2013ರಲ್ಲಿ 8 ಲಕ್ಷ ಕ್ಯೂಸೆಕ್‌ ನೀರನ್ನು ಹೊರಬಿಟ್ಟದ್ದರಿಂದ ಯಮುನಾ ಮಟ್ಟ 207.32ಕ್ಕೆ ತಲುಪಿತ್ತು. 2019ರಲ್ಲಿ  8.28 ಲಕ್ಷ ಕ್ಯೂಸೆಕ್‌ ನೀರನ್ನು ಹೊರಬಿಡಲಾಗಿ ನೀರಿನ ಮಟ್ಟ 206.6ಕ್ಕೆ ತಲುಪಿತ್ತು. ಆದರೆ ಈ ಎರಡೂ ಸಂದರ್ಭದಲ್ಲಿ ಪ್ರವಾಹ ಸ್ಥಿತಿ ಎದುರಾಗಿರಲಿಲ್ಲ.

No Comments

Leave A Comment