ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಭಾರತ ತಂಡದ ಪ್ರಾಯೋಜಕತ್ವದಿಂದ ಬೈಜೂಸ್ ಔಟ್, ‘ಡ್ರೀಮ್ 11’ ಎಂಟ್ರಿ: ಬಿಸಿಸಿಐ ಘೋಷಣೆ

ಮುಂಬೈ: ಬೈಜೂಸ್ ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವದಿಂದ ಹಿಂದೆ ಸರಿದ ದೀರ್ಘ ಕಾಲದ ನಂತರ ಬಿಸಿಸಿಐ ಹೊಸ ಪ್ರಾಯೋಜಕರನ್ನು ಆಯ್ಕೆ ಮಾಡಿದೆ. ಆನ್‌ಲೈನ್ ಫ್ಯಾಂಟಸಿ ಗೇಮಿಂಗ್ ವೇದಿಕೆಯಾದ ‘ಡ್ರೀಮ್11’ ಇನ್ಮುಂದೆ ಮೂರು ವರ್ಷಗಳ ಅವಧಿಗೆ ಟೀಂ ಇಂಡಿಯಾದ ಪ್ರಾಯೋಜಕತ್ವ ವಹಿಸಿಕೊಳ್ಳಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಘೋಷಿಸಿದೆ.

2023-25ರ ನಡುವೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿ ಭಾರತ ಕ್ರಿಕೆಟ್ ತಂಡವು ಜುಲೈ-ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಲಿರುವ ಎರಡು ಟೆಸ್ಟ್ ಪಂದ್ಯಗಳ ಸರಣಿಯಿಂದಲೇ ಭಾರತ ತಂಡದ ಜರ್ಸಿಯಲ್ಲಿ ‘ಡ್ರೀಮ್11’ ಕಾಣಿಸಿಕೊಳ್ಳಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ‘ನಾನು ಡ್ರೀಮ್ 11 ಅನ್ನು ಅಭಿನಂದಿಸುತ್ತೇನೆ ಮತ್ತು ಅವರನ್ನು ಮತ್ತೆ ಮಂಡಳಿಗೆ ಸ್ವಾಗತಿಸುತ್ತೇನೆ. ಬಿಸಿಸಿಐನ ಅಧಿಕೃತ ಪ್ರಾಯೋಜಕತ್ವದಿಂದ ಪ್ರಮುಖ ಪ್ರಾಯೋಜಕತ್ವದವರೆಗೆ ಡ್ರೀಮ್ 11 ಬಲಿಷ್ಠವಾಗಿ ಬೆಳೆದಿದೆ. ಇದು ಭಾರತೀಯ ಕ್ರಿಕೆಟ್‌ ನೀಡುವ ನಂಬಿಕೆ, ಮೌಲ್ಯ, ಸಾಮರ್ಥ್ಯ ಮತ್ತು ಬೆಳವಣಿಗೆಗೆ ನೇರ ಸಾಕ್ಷಿಯಾಗಿದೆ. ಈ ವರ್ಷಾಂತ್ಯದಲ್ಲಿ ಐಸಿಸಿ ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಿರುವ ಹೊತ್ತಿನಲ್ಲಿ, ಅಭಿಮಾನಿಗಳ ಮನರಂಜನಾ ಅನುಭವವನ್ನು ಉತ್ತಮಪಡಿಸುವುದು ನಮ್ಮ ಆದ್ಯತೆ. ಈ ಪ್ರಾಯೋಜಕತ್ವವು ಅದಕ್ಕೆ ಪೂರಕವಾಗಿರಲಿದೆ ಎಂಬ ವಿಶ್ವಾಸ ನನಗಿದೆ’ ಎಂದಿದ್ದಾರೆ.

ಡ್ರೀಮ್ 11ನ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಹರ್ಷ ಜೈನ್ ಮಾತನಾಡಿ, ‘ಬಿಸಿಸಿಐ ಹಾಗೂ ಟೀಂ ಇಂಡಿಯಾ ಜೊತೆಗಿನ ದೀರ್ಘಕಾಲದ ಒಡನಾಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಡ್ರೀ ಮ್ 11 ಉತ್ಸುಕವಾಗಿದೆ. ಡ್ರೀ ಮ್ 11 ಮೂಲಕ ಭಾರತ ತಂಡದ ಕೋಟ್ಯಂತರ ಅಭಿಮಾನಿಗಳೊಂದಿಗೆ ಕ್ರಿಕೆಟ್ ಮೇಲಿನ ನಮ್ಮ ಪ್ರೀತಿಯನ್ನು ಹಂಚಿಕೊಳ್ಳುತ್ತೇವೆ. ರಾಷ್ಟ್ರೀಯ ತಂಡದ ಪ್ರಮುಖ ಪ್ರಾಯೋಜಕತ್ವ ವಹಿಸಿಕೊಂಡಿರುವುದು ಹೆಮ್ಮೆಯ ಮತ್ತು ವಿಶೇಷ ಸಂಗತಿಯಾಗಿದೆ. ಭಾರತ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುವತ್ತ ನಾವು ಎದುರು ನೋಡುತ್ತಿದ್ದೇವೆ’ ಎಂದರು.

ಆನ್‌ಲೈನ್ ಕಲಿಕಾ ಆ್ಯಪ್ ಬೈಜೂಸ್ 2019 ರಿಂದ ಮೂರು ವರ್ಷಗಳ ಅವಧಿಗೆ ಟೀಂ ಇಂಡಿಯಾದ ಪ್ರಾಯೋಜಕತ್ವದ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದ ಪ್ರಕಾರ 450 ಕೋಟಿ ರೂಪಾಯಿ ಪಾವತಿಸಿದ್ದ ಬೈಜೂಸ್, ನಂತರ ಆರ್ಥಿಕ ಸಂಕಷ್ಟದ ಕಾರಣ ಹಿಂದಕ್ಕೆ ಸರಿಯುತ್ತಿರುವುದಾಗಿ ಹೇಳಿತು. ಬೈಜೂಸ್ ಭಾರತ ತಂಡದ ದ್ವಿಪಕ್ಷೀಯ ಪಂದ್ಯಗಳಿಗೆ 5.5 ಕೋಟಿ ರೂ. ಮತ್ತು ಐಸಿಸಿ ಟೂರ್ನಿಯ ಒಂದು ಪಂದ್ಯಕ್ಕೆ 1.7 ಕೋಟಿ ರೂ. ಪಾವತಿ ಮಾಡುತ್ತಿತ್ತು.

ಭಾರತ ತಂಡದ ಪ್ರಾಯೋಜಕರ ಪಟ್ಟಿ

ವಿಲ್ಸ್ : 1990

ಐಟಿಸಿ: 1990

ಸಹರಾ ಗ್ರೂಪ್: 2002-2013

ಸ್ಟಾರ್ ಇಂಡಿಯಾ: 2014-2017

ಒಪ್ಪೊ: 2017-2022

ಬೈಜೂಸ್: 2022-2023

ಡ್ರೀಮ್ 11: 2023-2026

No Comments

Leave A Comment