``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಕಣ್ಮುಂದೆ ಕಾಣುತ್ತಿದೆ ಕರಾಳ ಭವಿಷ್ಯ: ದಳಪತಿಗಳ ನಿದ್ದೆಗೆಡಿಸಿರುವ ಸಿದ್ದು; ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಸಖ್ಯ ಬಯಸುತ್ತಿರುವ ಜೆಡಿಎಸ್

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಜೆಡಿಎಸ್ ಒಂದು ರೀತಿಯ ಅಸ್ತಿತ್ವದ ಬಿಕ್ಕಟ್ಟು ಎದುರಿಸುತ್ತಿದೆ. ಜೊತೆಗೆ ಎಲ್ಲರಿಗೂ ಕಾಣುವಂತೆ ಬಿಜೆಪಿಯತ್ತ ಆಕರ್ಷಿತವಾಗುತ್ತಿದೆ.

ಶತ್ರುವಿನ ಶತ್ರು ಮಿತ್ರ ಎಂಬ ಪರಿಕಲ್ಪನೆಯಡಿ ಜೆಡಿಎಸ್ ಬಿಜೆಪಿ ತೆಕ್ಕೆಗೆ ಸರಿಯುತ್ತಿರುವಂತೆ ಕಾಣುತ್ತಿದೆ.   2005 ರಲ್ಲಿ ಜೆಡಿಎಸ್ ನಿಂದ ಉಚ್ಚಾಟನೆಗೊಂಡು ನಂತರ ಪ್ರಬಲವಾಗಿ ಬೆಳೆದು ನಿಂತಿರುವ ಸಿದ್ದರಾಮಯ್ಯ ದಳಪತಿಗಳ ಮೊದಲ ಶತೃವಾಗಿದ್ದಾರೆ.  ಜೆಡಿಎಸ್ ನ ಬಹು ದೊಡ್ಡ ತಂಡವನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡಿರುವುದು ದಳಪತಿಗಳ ನಿದ್ದೆಗೆಡಿಸಿದೆ.

ಇದರ ಜೊತೆಗೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಭಾವವನ್ನು ಹತ್ತಿಕ್ಕಿರುವ  ಡಿಸಿಎಂ ಹಾಗೂ ಒಕ್ಕಲಿಗ ಪ್ರಭಾವಿ ನಾಯಕ ಡಿ.ಕೆ ಶಿವಕುಮಾರ್ ಮತ್ತೊಬ್ಬ ಶತ್ರುವಾಗಿದ್ದಾರೆ.  ಮುಖ್ಯಮಂತ್ರಿ ಅಧಿಕಾರ ಗದ್ದುಗೆ ಏರಿದ ನಂತರ ಶಿವಕುಮಾರ್ ತಮ್ಮ ಪ್ರಾಬಲ್ಯವನ್ನು ಮತ್ತಷ್ಟು ವಿಸ್ತರಿಸಲು ಹಂಬಲಿಸುತ್ತಿದ್ದಾರೆ.

ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ದೆಹಲಿ ಭೇಟಿ ಮತ್ತು ಪಕ್ಷದ ಹೇಳಿಕೆಗಳು ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ.  ಮೈತ್ರಿ ವಿಚಾರವಾಗಿ ಗೌಡರು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ  ಎಂಬುದನ್ನು ಸೂಚಿಸುತ್ತದೆ. ಇತರ ವಿರೋಧ ಪಕ್ಷಗಳು ಮತ್ತು ಅವರ ಹಳೆಯ ಸ್ನೇಹಿತರು ಕಾರ್ಯಕ್ರಮವನ್ನು ಬಹಿಷ್ಕರಿಸಿದ ಹೊರತಾಗಿಯೂ ಗೌಡರು ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದು, ಜೆಡಿಎಸ್-ಬಿಜೆಪಿ ಸಂಬಂಧವು ಸಾಕಷ್ಟು ಗಾಡವಾಗಿದೆ ಎಂಬುದರ ಸೂಚನೆಯಾಗಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಎರಡು ಪಕ್ಷಗಳ ಬಳಿ ಸ್ಪಷ್ಟವಾದ ಉತ್ತರವಿಲ್ಲ. ಬಹಿರಂಗ ಮೈತ್ರಿಗೆ ಬಿಜೆಪಿ-ಜೆಡಿಎಸ್ ಮುಕ್ತವಾಗಿಲ್ಲ, ಆದರೆ ಹೊಂದಾಣಿಕೆ ರಾಜಕೀಯ ನಡೆಯುತ್ತದೆ ಎಂಬುದು ಮೂಲಗಳ ಮಾಹಿತಿಯಾಗಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ತನ್ನ ಮತಗಳನ್ನು ಜೆಡಿಎಸ್‌ಗೆ ವರ್ಗಾಯಿಸಿರುವ ಶಂಕೆಯಿದೆ. ಈ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರು 1.21 ಲಕ್ಷ ಮತಗಳನ್ನು ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಿಜೆಪಿಯ ಮತಗಳು 2018 ರಲ್ಲಿ 12,064 ರಿಂದ 2023 ರಲ್ಲಿ 51,318 ಕ್ಕೆ ಏರಿದ ಕಾರಣ ವರ್ಗಾವಣೆ ಸ್ಪಷ್ಟವಾಗಿ ಕಂಡುಬಂದಿದ್ದು, ನಾಲ್ಕು ಪಟ್ಟು ಹೆಚ್ಚಳವಾಗಿದೆ. ಜೆಡಿಎಸ್ ಮಾಜಿ ಅಧ್ಯಕ್ಷ ಬಿ ಸೋಮಶೇಖರ್ ಅವರು ಆರು ವಾರಗಳ ಹಿಂದೆ ಪಕ್ಷವನ್ನು ತೊರೆದಾಗ ಈ ರಹಸ್ಯ ತಿಳುವಳಿಕೆ ಬಗ್ಗೆ ಮಾಹಿತಿ ಬಹಿರಂಗಗೊಳಿಸಿದ್ದರು.

ಜೆಡಿಎಸ್‌ಗೆ ಇದು ಅಸ್ತಿತ್ವದ ಪ್ರಶ್ನೆಯಾಗಿದೆ . ಕೇವಲ 19 ಸ್ಥಾನಗಳನ್ನು ಪಡೆದಿರುವುದರಿಂದ ಸಂಖ್ಯಾಬಲ ಕುಗ್ಗಿದ್ದು ಮೊದಲಿಗಿಂತ ಹೆಚ್ಚು ದುರ್ಬಲವಾಗಿದೆ.  ಅದರ  ಜೊತೆಗೆ ಮಂಡ್ಯ ಲೋಕಸಭಾ ವ್ಯಾಪ್ತಿಯ 7/7 ಸ್ಥಾನಗಳಿಂದ ಕೇವಲ 1ಕ್ಕೆ ಕುಸಿದಿದೆ, ಅದರ ಮತಗಳ ಹಂಚಿಕೆಯು ಶೇ. 13.9 ಕಡಿಮೆಯಾಗಿದೆ .

ಜನತಾದಳವು 1999 ರಲ್ಲಿ ಕರ್ನಾಟಕದಲ್ಲಿ ತನ್ನ ಮೊದಲ ದೊಡ್ಡ ಹಿನ್ನಡೆಯನ್ನು ಎದುರಿಸಿತು. 1994-1999 ರಲ್ಲಿ ಆಡಳಿತ ಪಕ್ಷದಿಂದ ಕೇವಲ ಒಂದು ಸಣ್ಣ ವಿರೋಧ ಪಕ್ಷದ ಸ್ಥಾನಕ್ಕೆ ಇಳಿಯಿತು. ಲಿಂಗಾಯತ ಪ್ರಾಬಲ್ಯದ ಉತ್ತರ ಭಾಗವನ್ನು ಜೆಡಿಯು ಕಳೆದುಕೊಂಡಿತು ಮತ್ತು ದಕ್ಷಿಣದಲ್ಲಿ ಒಕ್ಕಲಿಗ ಪ್ರಾಬಲ್ಯವನ್ನು ಜೆಡಿಎಸ್‌ ಕಳೆದುಕೊಂಡಿತು.

ಜೆಡಿಎಸ್ ಪಕ್ಷಕ್ಕೆ ಮುಂದಿನ ಹಾದಿ ಕಷ್ಟಕರವಾಗಿದೆ ಎಂದು ಭಾವಿಸಿರುವ ದೇವೇಗೌಡರು ಬಿಜೆಪಿ ಸಖ್ಯ ಬಯಸುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಿ,  ಮತಗಳು ಶೇಕಡಾ 10 ಕ್ಕಿಂತ ಕಡಿಮೆಯಾದರೆ, ಮುಂದೆ ಮೂರು ಚುನಾವಣೆಗಳಲ್ಲಿ ಅಪಾಯವಿದೆ ಎಂಬುದನ್ನು ಅರಿತಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಬಿ.ಎಸ್ ಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

No Comments

Leave A Comment