ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಒಡಿಶಾ ರೈಲು ದುರಂತ: ತಂದೆಯ ನಂಬಿಕೆಯಿಂದ ಉಳಿಯಿತು ಸತ್ತಿದ್ದಾನೆಂದು ಶವಾಗಾರದಲ್ಲಿ ಇಟ್ಟಿದ್ದ ಮಗನ ಜೀವ!
ಕೋಲ್ಕತ್ತಾ: ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ದುರಂತದಲ್ಲಿ ಮಡಿದಿದ್ದವರ ಶವನ್ನು ಶವಾಗಾರದಲ್ಲಿ ಇರಿಸಲಾಗಿತ್ತು. ಆದರೆ ತನ್ನ ಮಗ ಸತ್ತಿಲ್ಲ ಎಂಬ ದೃಢ ನಂಬಿಕೆಯಿಂದ ಕೋಲ್ಕತ್ತಾದಿಂದ 230 ಕಿಮೀ ದೂರದ ಬಾಲಸೋರ್ ಗೆ ತೆರಳಿದ್ದ ತಂದೆಯೊಬ್ಬ ಶವಾಗಾರದಲ್ಲಿ ಇರಿಸಿದ್ದ ಮಗ ಜೀವಂತವಾಗಿರುವುದನ್ನು ಕಂಡು ಹೆಚ್ಚಿನ ಚಿಕಿತ್ಸೆಗಾಗಿ ಕೋಲ್ಕತ್ತಾಕ್ಕೆ ಕರೆತಂದಿದ್ದಾರೆ.
24 ವರ್ಷದ ಬಿಸ್ವಜಿತ್ ಮಲಿಕ್ ರೈಲು ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಆತನ ತಂದೆ ಹೆಲ್ಲರಾಮ್ ಮಲಿಕ್ ತನ್ನ ಮಗ ಸಾವನ್ನಪ್ಪಿದ್ದಾನೆ ಎಂದು ನಂಬಿ ಮನೆಯಲ್ಲಿ ಕುಳಿತಿದ್ದರೆ, ಇಂದು ಬಿಸ್ವಜಿತ್ ಮಲಿಕ್ ಜೀವಂತವಾಗಿ ಇರುತ್ತಿರಲಿಲ್ಲ. ಸದ್ಯ ಎಸ್ ಎಸ್ ಕೆಎಂ ಆಸ್ಪತ್ರೆಯ ಟ್ರಾಮಾ ಕೇರ್ ಯೂನಿಟ್ ನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಬಿಸ್ವಜಿತ್ ಇಂದು ಮತ್ತೆ ಶಸ್ತ್ರಚಿಕಿತ್ಸೆಗೆ ಒಳಗಾಗುವ ನಿರೀಕ್ಷೆ ಇದೆ. ಆತ ಗಂಭೀರವಾಗಿ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶುಕ್ರವಾರ ಶಾಲಿಮಾರ್ ನಿಲ್ದಾಣದಲ್ಲಿ ಬಿಸ್ವಜಿತ್ ಅವರನ್ನು ಇಳಿಸಿದ ಕೆಲವೇ ಗಂಟೆಗಳ ನಂತರ ಹೌರಾದ ಅಂಗಡಿಯ ಮಾಲೀಕ ಹೆಲ್ಲರಾಮ್ ಅವರಿಗೆ ಅಪಘಾತದ ಬಗ್ಗೆ ತಿಳಿದುಬಂದಿದೆ. ಕೂಡಲೇ ಅವರು ಬಿಸ್ವಜೀತ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ್ದರೂ ಮಗನಿಂದ ಅಸ್ಪಷ್ಟ ಮಾತುಗಳು ಕೇಳಿಬಂದಿದೆ. ಕೂಡಲೇ ಮತ್ತೊಂದು ಯೋಚನೆ ಮಾಡದೇ ಹೆಲ್ಲರಾಮ್ ಸ್ಥಳೀಯ ಆಂಬ್ಯುಲೆನ್ಸ್ ಚಾಲಕ ಪಲಾಶ್ ಪಂಡಿತ್ ಅವರನ್ನು ಕರೆದು, ತಮ್ಮ ಸೋದರ ಮಾವ ದೀಪಕ್ ದಾಸ್ ಅವರನ್ನು ತಮ್ಮೊಂದಿಗೆ ಬರುವಂತೆ ಹೇಳಿ, ಅದೇ ರಾತ್ರಿ ಬಾಲಸೋರ್‌ಗೆ ತೆರಳಿದರು. ಅಂದು ರಾತ್ರಿ 230 ಕಿ.ಮೀ ದೂರ ಪ್ರಯಾಣಿಸಿದರೂ ಯಾವುದೇ ಆಸ್ಪತ್ರೆಯಲ್ಲಿ ವಿಶ್ವಜೀತ್ ಪತ್ತೆಯಾಗಿರಲಿಲ್ಲ.
ನಾವು ಎಂದಿಗೂ ನಂಬಿಕೆ ಕಳೆದುಕೊಳ್ಳಲಿಲ್ಲ ಎಂದು ದಾಸ್ ದಿ ಟೈಮ್ಸ್ ಆಫ್ ಇಂಡಿಯಾಗೆ ಹೇಳಿದರು. ಮುಂದೆ ಎಲ್ಲಿಗೆ ಹೋಗಬೇಕು ಎಂಬ ನಿರೀಕ್ಷೆಯಲ್ಲಿ ನಾವು ಜನರನ್ನು ಕೇಳುತ್ತಲೇ ಇದ್ದೆವು, ಆಸ್ಪತ್ರೆಯಲ್ಲಿ ಯಾರೂ ಕಾಣದಿದ್ದರೆ, ಶವಗಳನ್ನು ಇರಿಸಲಾಗಿರುವ ಬಹನಗಾ ಹೈಸ್ಕೂಲ್ ಗೆ ಹೋಗಿ ಎಂದು ಒಬ್ಬರು ನಮಗೆ ಹೇಳಿದರು. ಅದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲದಿದ್ದರೂ ಅಲ್ಲಿಗೆ ಹೋದೆವು. ತಾತ್ಕಾಲಿಕ ಶವಾಗಾರದಲ್ಲಿ ಅನೇಕ ಮೃತ ದೇಹಗಳನ್ನು ಕಂಡೆವು. ಅಲ್ಲಿ ಬಿಸ್ವಜಿತ್ ದೇಹ ಇರುವುದು ಕಂಡುಬಂತು. ಆತನಿಗೆ ಗಂಭೀರ ಗಾಯಗಳಾಗಿದ್ದು ಪ್ರಜ್ಞಾಹೀನನಾಗಿದ್ದ. ಕೆಲ ಸಮಯದ ನಂತರ ಆತನ ಬಲಗೈ ನಡುಗುತ್ತಿರುವುದು ಗಮನಿಸಿದೇವು. ನಾವು ತಕ್ಷಣ ಆತನನ್ನು ಆಂಬ್ಯುಲೆನ್ಸ್‌ನಲ್ಲಿ ಬಾಲಸೋರ್ ಆಸ್ಪತ್ರೆಗೆ ಕರೆದುಕೊಂಡು ಹೋದೆವು, ಅಲ್ಲಿ ಬಿಸ್ವಜಿತ್ ಗೆ ಕೆಲವು ಚುಚ್ಚುಮದ್ದನ್ನು ನೀಡಿದರು. ಅವನ ಸ್ಥಿತಿಯನ್ನು ನೋಡಿ, ಅವರು ಅವನನ್ನು ಕಟಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದರು.
ನಾವು ತಡ ಮಾಡದೇ ಆತನನ್ನು ಕೋಲ್ಕತ್ತಾಗೆ ಕರೆದುಕೊಂಡು ಹೋಗಲು ನಿರ್ಧರಿಸಿದೇವು ಎಂದು ಹೆಲ್ಲರಾಮ್ ಮಲಿಕ್ ಮಗ ಬಿಸ್ವಜಿತ್ ಅವರನ್ನು ಹುಡುಕಲು ಒಡಿಶಾಗೆ ಬಂದಿದ್ದ ಆಂಬ್ಯುಲೆನ್ಸ್ ಚಾಲಕ ಪಲಾಶ್ ಪಂಡಿತ್ ಹೇಳಿದರು. ನಾವು ಮತ್ತೆ SSKM ಆಸ್ಪತ್ರೆಗೆ ಬಂದೆವು. ಅಲ್ಲಿ ಅವರನ್ನು ಸ್ಟ್ರೆಚರ್‌ನಲ್ಲಿ ಇರಿಸಲಾಯಿತು. ಇನ್ನೂ ಪ್ರಜ್ಞೆ ಬರದ ಬಿಸ್ವಜಿತ್ ಭಾನುವಾರ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸೋಮವಾರ ಅವರ ಕಾಲಿಗೆ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಯಲಿದೆ.
ಬಂಕುರಾ ಸಮ್ಮಿಲಾನಿ ವೈದ್ಯಕೀಯ ಕಾಲೇಜಿನ ಫೋರೆನ್ಸಿಕ್ ಮೆಡಿಸಿನ್ ಮುಖ್ಯಸ್ಥ ಪ್ರೊಫೆಸರ್ ದಾಸ್ ಅವರು, ದುರಂತ ಸಮಯದಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಿರುತ್ತದೆ. ಅಂತಹ ಸಮಯದಲ್ಲಿ ವೈದ್ಯರಿಗೆ ವಿಶೇಷವಾಗಿ ದೇಹದ ಪ್ರಮುಖ ಭಾಗಗಳನ್ನು ನೋಡಲು ಸಮಯ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ, ಗಾಯಗೊಂಡ ವ್ಯಕ್ತಿಯು ಪ್ರಜ್ಞಾಹೀನನಾಗಿದ್ದರೆ, ಜನರು ಅಂತಹ ವ್ಯಕ್ತಿಯನ್ನು ಸತ್ತ ಎಂದು ತಪ್ಪಾಗಿ ಗ್ರಹಿಸಬಹುದು ಎಂದು ಹೇಳಿದರು.