ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಡಿಕೆಶಿ ವಿರುದ್ಧದ ಸಿಬಿಐ ವಿಚಾರಣೆಗೆ ನೀಡಿದ್ದ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ವಿಚಾರಣೆಗೆ ನೀಡಿದ್ದ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ಏಪ್ರಿಲ್ 6 ರವರೆಗೆ ವಿಸ್ತರಿಸಿದೆ.

ತಮ್ಮ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಕಾಂಗ್ರೆಸ್ ಮುಖಂಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ಪೀಠ, ಮಧ್ಯಂತರ ತಡೆಯಾಜ್ಞೆಯನ್ನು ವಿಸ್ತರಿಸಿದೆ.

ಶಿವಕುಮಾರ್ ಅವರು ತಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲು ನೀಡಿರುವ ಅನುಮತಿಯನ್ನು ಪ್ರಶ್ನಿಸಿ ಸಲ್ಲಿಸಿರುವ ಇನ್ನೊಂದು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಏಪ್ರಿಲ್ 6ರವರೆಗೆ ಕಾಲಾವಕಾಶ ನೀಡಿ, ವಿಚಾರಣೆಯನ್ನು ಮುಂದೂಡಿದೆ.

ರಾಜ್ಯ ಸರ್ಕಾರ, ಸಿಬಿಐ ತನಿಖೆಗೆ ಒಪ್ಪಿಗೆ ನೀಡಿದ ನಂತರ ಕೇಂದ್ರ ತನಿಖಾ ಸಂಸ್ಥೆ 2020ರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಡಿಕೆಶಿ ವಿರುದ್ಧ ಪ್ರಕರಣ ದಾಖಲಿಸಿತ್ತು.

ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗಿರುವುದರಿಂದ ಶಿವಕುಮಾರ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿಬಿಐಗೆ ಸರ್ಕಾರ ಅನುಮತಿ ನೀಡಿದ್ದರ ವಿರುದ್ಧ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ಬೇಕು ಎಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸರ್ಕಾರಿ ವಕೀಲರು ನಾಲ್ಕು ವಾರಗಳ ಕಾಲಾವಕಾಶ ಕೋರಿದ್ದರು. ಆದರೆ ಕೋರ್ಟ್ ಏಪ್ರಿಲ್ 6ರ ವರೆಗೆ ಕಾಲಾವಕಾಶ ನೀಡಿ, ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಿದೆ.

No Comments

Leave A Comment