
ಅಮೆರಿಕದ 30 ನಗರಗಳ ಜೊತೆ ನಿತ್ಯಾನಂದನ ಸಾಂಸ್ಕೃತಿಕ ಸಹಭಾಗಿತ್ವ: ಕೈಲಾಸದ ಜೊತೆಗಿನ ‘ಸಿಸ್ಟರ್ ಸಿಟಿ ಒಪ್ಪಂದ’ ರದ್ಧು!
ನ್ಯೂಯಾರ್ಕ್: ದೇಶಭ್ರಷ್ಟ, ಭಾರತ ಮೂಲದ ನಿತ್ಯಾನಂದನ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ವು ಅಮೆರಿಕದ 30ಕ್ಕೂ ಹೆಚ್ಚು ನಗರಗಳೊಂದಿಗೆ ಸಾಂಸ್ಕೃತಿಕ ಸಹಭಾಗಿತ್ವಕ್ಕೆ ಸಹಿ ಹಾಕಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಅಮೆರಿಕದ ನ್ಯೂಜೆರ್ಸಿಯ ನೆವಾರ್ಕ್ ನಗರವು ನಿತ್ಯಾನಂದನ ಕಾಲ್ಪನಿಕ ದೇಶ ಕೈಲಾಸದ ಜೊತೆಗಿನ ‘ಸಿಸ್ಟರ್ ಸಿಟಿ ಒಪ್ಪಂದ’ವನ್ನು ರದ್ದುಗೊಳಿಸಿದ ಕೆಲ ದಿನಗಳ ಬಳಿಕ ಈ ವರದಿ ಬಂದಿದೆ. ಅತ್ಯಾಚಾರ ಆರೋಪದಿಂದ ದೇಶ ಬಿಟ್ಟಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಮತ್ತೆ ಸುದ್ದಿಗೆ ಬಂದಿದ್ದಾನೆ. ದೇಶವನ್ನು ಬಿಟ್ಟು ಪರಾರಿಯಾಗಿರುವ ನಿತ್ಯಾನಂದ ಈಕ್ವೆಡಾರ್‌ನ ಕರಾವಳಿಯಲ್ಲಿ ನೆಲೆಗೊಂಡಿರುವ ಒಂದು ದ್ವೀಪದಲ್ಲಿ ತನ್ನದೇ ಆದ ಕೈಲಾಸ ಎಂಬ ದೇಶವನ್ನು ನಿರ್ಮಾಣಮಾಡಿಕೊಂಡಿದ್ದಾನೆ.
ಇದರೊಂದಿಗೆ ನಿತ್ಯಾನಂದನ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ಅಮೆರಿಕದ 30 ಕ್ಕೂ ಹೆಚ್ಚು ನಗರಗಳೊಂದಿಗೆ “ಸಾಂಸ್ಕೃತಿಕ ಪಾಲುದಾರಿಕೆ” ಗೆ ಸಹಿ ಹಾಕಿದೆ ಎಂದು ಮಾಧ್ಯಮ ವರದಿಯೊಂದು ಇತ್ತೀಚೆಗೆ ತಿಳಿಸಿದೆ. ಆದರೆ ಒಪ್ಪಂದ ಮಾಡಿಕೊಂಡಿರುವ ದೇಶಗಳಿಗೆ ನಿತ್ಯಾನಂದ ಅಥವಾ ಕೈಲಾಸದ ಅಸಲಿಯತ್ತುಗಳು ತಿಳಿಯದೇ ಇರುವುದು ಪರಿಶೀಲನೆ ಬಳಿಕ ತಿಳಿದು ಬಂದಿದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.
ನೆವಾರ್ಕ್ ಮತ್ತು ನಕಲಿ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ” ನಡುವಿನ ‘ಸಹೋದರ-ನಗರ’ ಒಪ್ಪಂದಕ್ಕೆ ಈ ವರ್ಷ ಜನವರಿ 12 ರಂದು ಸಹಿ ಹಾಕಲಾಗಿದೆ. ಸಹಿ ಮಾಡುವ ಸಮಾರಂಭ ನೆವಾರ್ಕ್ನ ಸಿಟಿ ಹಾಲ್ನಲ್ಲಿ ನಡೆದಿದೆ. ಆಶ್ಚರ್ಯ ಅಂದರೆ ನೆವಾರ್ಕ್ ಗೆ ಒಪ್ಪಂದದ ವೇಳೆ ಕೈಲಾಸದ ಬಗ್ಗೆ ಆಗಲಿ ಅಥವಾ ನಿತ್ಯಾನಂದನ ಬಗ್ಗೆಯಾಗಲಿ ತಿಳಿದಿರಲಿಲ್ಲ. ತಿಳಿದ ಬಳಿಕ ಈ ಕಾಲ್ಪನಿಕ ದೇಶದೊಂದಿಗೆ ‘ಸಿಸ್ಟರ್ ಸಿಟಿ’ ಒಪ್ಪಂದವನ್ನು ನೆವಾರ್ಕ್ ರದ್ದುಗೊಳಿಸಿದೆ.