ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಉಡುಪಿ: ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ 24ಕ್ಕೂ ಅಧಿಕ ಆರೋಪಿಗಳ ಬಂಧನ

ಉಡುಪಿ;ಮಾ 16.: ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚುವ ಸಲುವಾಗಿ ವಿಶೇಷ ತಂಡಗಳನ್ನು ರಚಿಸಿದ್ದು, ಆ ತಂಡಗಳು ಕಳೆದ 15 ದಿನಗಳಿಂದ ಹೊರಜಿಲ್ಲೆ, ಹೊರರಾಜ್ಯಗಳಲ್ಲಿ ಸಂಚರಿಸಿ ಒಟ್ಟು 24ಕ್ಕೂ ಅಧಿಕ ಸಂಖ್ಯೆಯ ಆಸಾಮಿಗಳನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಆ ಪೈಕಿ ಭಾರತ – ನೇಪಾಳ ಗಡಿ ಪ್ರದೇಶ – 01, ಮಧ್ಯಪ್ರದೇಶ – 01, ಕೇರಳ – 03, ಹೊರಜಿಲ್ಲೆಗಳಲ್ಲಿ – 04 ಹಾಗೂ ಉಳಿದವರನ್ನು ಜಿಲ್ಲೆಯಲ್ಲಿ ಪತ್ತೆ ಹಚ್ಚಲಾಗಿದೆ. ತಲೆಮರೆಸಿಕೊಂಡವರ ಪೈಕಿ ದರೋಡೆ, ಸರಕಾರಿ ನೌಕರರ ಮೇಲೆ ಹಲ್ಲೆ, ಕಳವು, ಅಪಹರಣ, ಬಲದ್ಘ್ರಹಣ (ಒತ್ತಾಯ ಪೂರ್ವಕವಾಗಿ ಸುಲಿಗೆ), ಅತ್ಯಾಚಾರ, ಮಾರಣಾಂತಿಕ ರಸ್ತೆ ಅಪಘಾತ ಹಾಗೂ ಚೆಕ್‌ ಅಮಾನ್ಯ ಪ್ರಕರಣಗಳಲ್ಲಿ ಒಳಗೊಂಡ ಆಸಾಮಿಗಳಾಗಿರುತ್ತಾರೆ.

ಪ್ರಕಾಶ್‌ ಎಂಬಾತ, ಹೆಬ್ರಿ ಠಾಣೆಯಲ್ಲಿ ವರದಿಯಾದ ದರೋಡೆ ಪ್ರಕರಣದಲ್ಲಿ ಶಿಕ್ಷೆ ಹೊಂದಿ ಕಳೆದ 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಕೊಪ್ಪಳ ಜಿಲ್ಲೆಯ ಮಾದನೂರಿನಲ್ಲಿ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಒಲಿವರ್‌ ಗ್ಲಾಡನ್‌ ವಿಲ್ಸನ್‌ ಎಂಬಾತ ಕಾಪು ಠಾಣೆಯ ವ್ಯಾಪ್ತಿಯ ಚೆಕ್‌ ಅಮಾನ್ಯ ಪ್ರಕರಣದಲ್ಲಿ ಶಿಕ್ಷೆ ಹೊಂದಿ ಕಳೆದ 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಉದ್ಯಾವರ ಬಾಲಾಜಿ ಅಪಾರ್ಟ್ಮೆಂಟ್‌ ಬಳಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬ್ರಹ್ಮಾವರ ಠಾಣೆಯಲ್ಲಿ ವರದಿಯಾದ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ರಾಜೀವ ಶೆಟ್ಟಿ ಎಂಬಾತನನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಬೆಳ್ಳೂರು ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಶಿರ್ವಾ ಠಾಣೆಯಲ್ಲಿ ವರದಿಯಾದ ಕನ್ನ ಕಳವು ಪ್ರಕರಣದಲ್ಲಿ ಭಾಗಿಯಾಗಿ ಕಳೆದ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಗುರುಪ್ರಸಾದ್ ಎಂಬಾತನನ್ನು ಮೂಡಬಿದ್ರಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ, ಇವರಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಉಮರ್‌ ಎಂಬಾತ ಶಿರ್ವಾ ಠಾಣೆಯಲ್ಲಿ ವರದಿಯಾದ ಅಪಹರಣ ಮತ್ತು ಬಲದ್ಘ್ರಹಣ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಕಳತ್ತೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಶಿರ್ವಾ ಠಾಣೆಯಲ್ಲಿ ವರದಿಯಾದ ಕನ್ನ ಕಳವು ಪ್ರಕರಣದಲ್ಲಿ ಭಾಗಿಯಾಗಿ ಕಳೆದ 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸುದರ್ಶನ್‌ ಎಂಬಾತನನ್ನು ಬೆಳ್ಳೆ ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮಣಿಪಾಲ ಠಾಣೆಯಲ್ಲಿ ವರದಿಯಾದ ಪೋಕ್ಸೋ ರೇಪ್ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಜೀತೇಂದ್ರ ಶಾರ್ಕಿ, ನೇಪಾಳ ಎಂಬಾತನನ್ನು ಭಾರತ ನೇಪಾಳ ಗಡಿಭಾಗದ ಉತ್ತರಾಖಂಡದ ಗಡಿಕೋಟ್‌ ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಗಳಾದ ಬಾಬು, ಕೃಷ್ಣನ್ ಕುಟ್ಟಿ, ಸುನಿಲ್ ಕುಮಾರ್, ಎಂಬವರನ್ನು ಕೇರಳ ರಾಜ್ಯ ಮತ್ತು ಕುಂದಾಪುರದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬೈಂದೂರು ಠಾಣೆಯಲ್ಲಿ ವರದಿಯಾದ ಕಳವು ಪ್ರಕರಣದಲ್ಲಿ ಭಾಗಿಯಾಗಿ ಕಳೆದ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸಹದೇವ ಎಂಬಾತನನ್ನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ನ್ಯಾಸರ್ಗಿ ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕುಂದಾಪುರ ಸಂಚಾರ ಠಾಣೆಯಲ್ಲಿ ವರದಿಯಾದ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಧ್ಯಪ್ರದೇಶದ ವಾಸಿ ಶೇಷಮನಿ ನಾಮದೇವ್‌ ಮಧ್ಯಪ್ರದೇಶದ ದಿಯೋತಲಾಬ್‌ ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ನ್ಯಾಯಾಲಯವು ಆತನಿಗೆ ದಂಡ ವಿಧಿಸಿ, ಪ್ರಕರಣವನ್ನು ಮುಕ್ತಾಯಗೊಳಿಸಿರುತ್ತದೆ.

ಕೊಲ್ಲೂರು ಠಾಣೆಯಲ್ಲಿ ವರದಿಯಾದ ಪ್ರಕರಣವೊಂದರಲ್ಲಿ ಭಾಗಿಯಾಗಿ ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತೆ ನಿಶಿ ಎಂಬಾಕೆಯನ್ನು ಕೇರಳ ರಾಜ್ಯದ ತಳಿಪರಾಂಬ ಎಂಬಲ್ಲಿ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.

ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸ್‌ ಅಧಿಕಾರಿ / ಸಿಬ್ಬಂದಿಯವರನ್ನು ಪೊಲೀಸ್‌ ಅಧೀಕ್ಷಕರಾದ ಅಕ್ಷಯ್‌ ಎಂ. ಹೆಚ್.ರವರು ಶ್ಲಾಘಿಸಿರುತ್ತಾರೆ.

No Comments

Leave A Comment