ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಮಹಾಲಕ್ಷ್ಮಿ ಸೊಸೈಟಿ ಮ್ಯಾನೇಜರ್ ಆತ್ಮಹತ್ಯೆ ಪ್ರಕರಣ : ಐದು ಮಂದಿಯ ವಿರುದ್ಧ ಪ್ರಕರಣ ದಾಖಲು
ಮಲ್ಪೆ: ಉಡುಪಿ ಮಹಾಲಕ್ಷ್ಮೀ ಕೋ ಆಪರೇಟಿವ್ ಸೊಸೈಟಿಯ ಮ್ಯಾನೇಜರ್ ಸುಬ್ಬಣ್ಣ (50) ಎಂಬವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಪರಿಶಿಷ್ಟ ಜಾತಿಗೆ ಸೇರಿದ ಸುಬ್ಬಣ್ಣ ಮಾ.8ರಂದು ರಾತ್ರಿ ವೇಳೆ ಮಲ್ಪೆಯ ರಾಜ್ ಮಹಲ್ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹದ ಬಳಿ ಡೆತ್ ನೋಟ್ ದೊರಕಿದ್ದು, ಸಾವಿಗೆ ಬ್ಯಾಂಕಿನ ಆಡಳಿತ ಮಂಡಳಿಯ ಒತ್ತಡ ಮೇಲಾಧಿಕಾರಿಯ ಅಸಹಕಾರ ಮತ್ತು ಸಾಲಗಾರನ ಮೋಸದ ನಡವಳಿಕೆ ಕಾರಣ ಎಂದು ದೂರಲಾಗಿದೆ.
ಬ್ಯಾಂಕಿನ ಅಧ್ಯಕ್ಷ ಯಶ್ಪಾಲ್ ಸುವರ್ಣ, ಆಡಳಿತ ನಿರ್ದೇಶಕ ಜಗದೀಶ್ ಮೊಗವೀರ, ಮಾಜಿ ಆಡಳಿತ ನಿರ್ದೇಶಕ ಜೆ.ಕೆ ಸೀನ ಗಂಗೊಳ್ಳಿ, ಮ್ಯಾನೇಜರ್ ಸಾರಿಕಾ, ಸಾಲಗಾರ ರಿಯಾಝ್ ಎಂಬವರು ನೀಡಿದ ಮಾನಸಿಕ ಒತ್ತಡ ಹಾಗೂ ಬ್ಯಾಂಕಿನ ಆಡಳಿತ ಮಂಡಳಿ ಸಾಲ ವಸೂಲಾತಿಯನ್ನು ಮಾಡಿ ಕೊಡದಿದ್ದರೆ ನಿನ್ನ ಮನೆಯನ್ನಾದರೂ ಮಾರಿ ಬ್ಯಾಂಕಿನ ಸಾಲ ತೀರಿಸಬೇಕು, ಇಲ್ಲದಿದ್ದರೆ ನಿನ್ನ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮೃತರ ಸಹೋದರ ಸುರೇಶ್ ಕೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಾವಿನ ಬಗ್ಗೆ ಸಂಶಯ ಇದ್ದು, ಆದುದರಿಂದ ಆಡಳಿತ ಮಂಡಳಿ ಮತ್ತು ಸಾಲಗಾರನ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ಅದರಂತೆ ಮಲ್ಪೆ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.