ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಗಗನಯಾನ: ಇಸ್ರೋದ ಬಹು ನಿರೀಕ್ಷಿತ ಪ್ಯಾರಾಚೂಟ್ ಪರೀಕ್ಷೆ ಯಶಸ್ಸು
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವಾಕಾಂಕ್ಷಿ ಯೋಜನೆಯಾದ ಗಗನಯಾನ ಯೋಜನೆಯ ಭಾಗದ ಬಹು ನಿರೀಕ್ಷಿತ ಪ್ಯಾರಾಚೂಟ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.
ಗಗನಯಾನಿಗಳನ್ನು ಹೊತ್ತ ಕೋಶವನ್ನು (ಮಾಡ್ಯೂಲ್) ಇಳಿಸುವಲ್ಲಿ ಬಳಕೆಯಾಗುವ ಪ್ಯಾರಾಚೂಟ್‌ಗಳ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ತಿಳಿಸಿದೆ.
ಸದ್ಯ ಇಸ್ರೊ ಮಾನವಸಹಿತ ಗಗನಯಾನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ನಡುವೆ ಗಗನಯಾನಿಗಳನ್ನು ಹೊತ್ತ ಕೋಶವು ಭೂಮಿಗೆ ಇಳಿಯುವಾಗ ಒಟ್ಟು 10 ಪ್ಯಾರಾಚೂಟ್‌ಗಳು ಹಲವು ಹಂತಗಳಲ್ಲಿ ಕೆಲಸ ಮಾಡುತ್ತವೆ. ಮೊದಲ ಎರಡು ಹಂತದಲ್ಲಿ ಕೆಲಸ ಮಾಡುವ ಒಟ್ಟು ನಾಲ್ಕು ಪ್ಯಾರಾಚೂಟ್‌ಗಳ ವ್ಯವಸ್ಥೆಯನ್ನು ಮಾರ್ಚ್ 1 ಮತ್ತು ಮಾರ್ಚ್ 3ರಂದು ಪರೀಕ್ಷೆಗೆ ಒಳಪಡಿಸಲಾಗಿತ್ತು.
ಮತ್ತೊಂದು ಹಂತದ ಈ ಪ್ಯಾರಾಚೂಟ್ ತಂತ್ರಜ್ಞಾನವನ್ನು ಚಂಡೀಗಡದ ಟರ್ಮಿನಲ್ ಬ್ಯಾಲಿಸ್ಟಿಕ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ (ಟಿಬಿಆರ್‌ಎಲ್) ಪರೀಕ್ಷಿಸಲಾಗಿದೆ. ಗಗನಯಾನಿಗಳನ್ನು ಹೊತ್ತ ಕೋಶವು ಬಾಹ್ಯಾಕಾಶದಿಂದ ಭೂಮಿಯ ವಾತಾವರಣವನ್ನು ಪ್ರವೇಶಿಸಿ, ನೆಲಕ್ಕೆ ಇಳಿಯುವಾಗ ಇರಬಹುದಾದ ಭೌತಿಕ ಸ್ಥಿತಿಯನ್ನು, ತೆರೆದ ಪ್ರಯೋಗಾಲಯದಲ್ಲಿ ನಿರ್ಮಿಸಿ ಈ ಪರೀಕ್ಷೆ ನಡೆಸಲಾಗಿದೆ ಎಂದು ಇಸ್ರೋ ತಿಳಿಸಿದೆ.
ಈ ಪ್ರಯೋಗಾಲಯದಲ್ಲಿ ಇರುವ ಹಳಿಗಳ ಮೇಲೆ ರಾಕೆಟ್ ಚಾಲಿತ ಯಂತ್ರವನ್ನು ಅಳವಡಿಸಿ ವೇಗವಾಗಿ ಚಲಿಸುವಂತೆ ಮಾಡಲಾಗಿದೆ. ಯಂತ್ರದ ಹಿಂಭಾಗದಲ್ಲಿ ಈ ಪ್ಯಾರಾಚೂಟ್‌ಗಳನ್ನು ಅಳವಡಿಸಲಾಗಿತ್ತು. ಪ್ಯಾರಾಚೂಟ್‌ಗಳು ಸರಿಯಾಗಿ ಕೆಲಸ ಮಾಡಿವೆ ಎಂದು ಇಸ್ರೊ ಹೇಳಿದೆ.
ಗಗನಯಾನ ಕಾರ್ಯಾಚರಣೆಗೆಂದೇ ಇಸ್ರೊ, ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ ಮತ್ತು ಏರಿಯಲ್ ಡೆಲಿವರಿ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ ಜಂಟಿಯಾಗಿ ಈ ಪ್ಯಾರಾಚೂಟ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ. ಮಾನವಸಹಿತ ಬಾಹ್ಯಾಕಾಶ ಯಾನವನ್ನು ಸಾಧ್ಯವಾಗಿಸುವುದು ಗಗನಯಾನ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಮೂವರು ಗಗನಯಾನಿಗಳನ್ನು 400 ಕಿಲೋಮೀಟರ್ ಎತ್ತರದ ಕಕ್ಷೆಗೆ ಸೇರಿಸಲಾಗುತ್ತದೆ. ಮೂರು ದಿನಗಳ ಬಳಿಕ ಅವರು ಭೂಮಿಗೆ ವಾಪಸಾಗಲಿದ್ದಾರೆ. ದೇಶದ ಮೊದಲ ಮಾನವಸಹಿತ ಗಗನಯಾನವು 2024ರ ಕೊನೆಯಲ್ಲಿ ಕೈಗೂಡಲಿದೆ ಎಂದು ಕೇಂದ್ರ ಸರ್ಕಾರ ಇತ್ತೀಚಿಗೆ ಮಾಹಿತಿ ನೀಡಿತ್ತು.