ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ತಮಿಳುನಾಡು: ಕೇಸರಿ ಬಿಜೆಪಿಪಕ್ಷ ತೊರೆದು ಎಐಎಡಿಎಂಕೆ ಸೇರಿದ 13 ಮುಖಂಡರು
ಚೆನ್ನೈ: ಭಾರತೀಯ ಜನತಾ ಪಕ್ಷದ ತಮಿಳುನಾಡು ಘಟಕದ ಒಟ್ಟು 13 ಪದಾಧಿಕಾರಿಗಳು ಬುಧವಾರ ಕೇಸರಿ ಪಕ್ಷ ತೊರೆದು ಮಿತ್ರ ಪಕ್ಷ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಸೇರಿದ್ದಾರೆ.
ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ನಮ್ಮ ಪಕ್ಷದ ನಾಯಕರನ್ನು ಖರೀದಿ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕ ಆರೋಪಿಸಿದ ಬೆನ್ನಲ್ಲೇ ಬಿಜೆಪಿಯ ಐಟಿ ವಿಭಾಗಕ್ಕೆ ಸೇರಿದ 13 ಮುಖಂಡರು ಎಐಎಡಿಎಂಕೆ ಸೇರಿದ್ದಾರೆ.
ವರ್ಷಗಳಿಂದ ಬಿಜೆಪಿಗಾಗಿ ದುಡಿದಿದ್ದೇನೆ. ನಾನು ಯಾವುದೇ ಸ್ಥಾನಮಾನ ನಿರೀಕ್ಷೆ ಮಾಡಿಲ್ಲ ಎಂಬುದು ಜನರಿಗೆ ಗೊತ್ತಿದೆ. ಆದರೆ ಕಳೆದ ಕೆಲವು ದಿನಗಳಿಂದ ಪಕ್ಷದಲ್ಲಿನ ಘಟನೆಗಳನ್ನು ಪರಿಗಣಿಸಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಬಿಜೆಪಿ ಐಟಿ ವಿಭಾಗದ ಜಿಲ್ಲಾಧ್ಯಕ್ಷ ಓರತಿ ಅನ್ಬರಸು ಅವರು ಹೇಳಿದ್ದಾರೆ.
“ನಮ್ಮ ನಾಯಕ ಮತ್ತು ಮಾಜಿ ಬಿಜೆಪಿ ರಾಜ್ಯ ಐಟಿ ವಿಂಗ್ ಮುಖ್ಯಸ್ಥ ಸಿಟಿಆರ್ ನಿರ್ಮಲ್ ಕುಮಾರ್ ಅವರು ತೋರಿಸಿದ ಮಾರ್ಗವನ್ನು ನಾವು ಅನುಸರಿಸಲು ನಿರ್ಧರಿಸಿದ್ದೇವೆ” ಎಂದು ಅನ್ಬರಸು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ ಕಾರ್ಯನಿರ್ವಹಣೆ ಶೈಲಿ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆಯಲ್ಲಿ ಪಕ್ಷದ ಐಟಿ ವಿಭಾಗದ ಮುಖ್ಯಸ್ಥರಾಗಿದ್ದ ಸಿಟಿ ಆರ್ ನಿರ್ಮಲ್ ಕುಮಾರ್ ಅವರು ಕೇಸರಿ ಪಕ್ಷಕ್ಕೆ ರಾಜೀನಾಮೆ ನೀಡಿ ಎಐಎಡಿಎಂಕೆ ಸೇರಿದ್ದಾರೆ.