ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಹಾವೇರಿ: ದಲಿತ ಕುಟುಂಬಗಳ ಮನೆಗಳಿಗೆ ಬೆಂಕಿ ಹಚ್ಚಿದ 25 ಮಂದಿ ವಿರುದ್ಧ ಪ್ರಕರಣ ದಾಖಲು

ಹುಬ್ಬಳ್ಳಿ:  ರಾಣೇಬೆನ್ನೂರು ತಾಲೂಕಿನ ನಂದಿಹಳ್ಳಿ ಗ್ರಾಮದ ದಲಿತ ಕುಟುಂಬಗಳ ಎರಡು ಮನೆಗಳಿಗೆ ಬೆಂಕಿ ಹಚ್ಚಿದ ಆರೋಪದ ಮೇಲೆ ಹಾವೇರಿ ಪೊಲೀಸರು 25 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಅಕ್ಕ ಪಕ್ಕದಲ್ಲಿರುವ ಎರಡು ಮನೆಗಳಲ್ಲಿ 12 ಮಂದಿ ಕುಟುಂಬ ಸದಸ್ಯರು ಮಲಗಿದ್ದರು. ಗ್ರಾಮಸ್ಥರ ಗುಂಪು ದಲಿತ ಕಾಲೋನಿಯ ಮನೆಗಳಿಗೆ ನುಗ್ಗಿ ಪೆಟ್ರೋಲ್, ಕಟ್ಟಿಗೆ ಎಸೆಯಲು ಆರಂಭಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆರೋಪಿಗಳು ಮೊದಲ ಮನೆಯನ್ನು ಸುಟ್ಟು ಹಾಕಿದರು. ಹೊಗೆಯನ್ನು ಗಮನಿಸಿದ ಕುಟುಂಬಸ್ಥರು ಮನೆಯಿಂದ ಹೊರಬಂದು ಪ್ರಾಣ ರಕ್ಷಣೆಗಾಗಿ ಗ್ರಾಮದಿಂದ ಓಡಿ  ಹೋದರು. ಇದೀಗ ಜಿಲ್ಲೆಯ ವಿವಿಧ ಗ್ರಾಮಗಳ ಸಂಬಂಧಿಕರ ಮನೆಗಳಲ್ಲಿ ನೆಲೆಸಿದ್ದಾರೆ.  ಹಾವೇರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರ  ತವರು ಜಿಲ್ಲೆಯಾಗಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹಾವೇರಿಯ ಹಿರಿಯ ಪೊಲೀಸ್ ಅಧಿಕಾರಿಗಳು ಇದೀಗ ರಾಣೆಬೆನ್ನೂರಿಗೆ ಬಂದಿಳಿದಿದ್ದಾರೆ. ಈವರೆಗೆ ಇಬ್ಬರು ಶರಣಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮನೆಗೆ ಬೆಂಕಿ ಹಚ್ಚಿದ ಘಟನೆಯಲ್ಲಿ ಭಾಗಿಯಾದ ಗ್ರಾಮಸ್ಥರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣಗಳು ದಾಖಲಾಗಿವೆ.

ಬಹುತೇಕ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಇನ್ನೂ ತಲೆಮರೆಸಿಕೊಂಡಿರುವ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಾರಂಭಿಸಿದ್ದಾರೆ. ಇನ್ನೂ ಹಲವು ಮಂದಿ ಪೊಲೀಸರಿಗೆ ಶರಣಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಭಾನುವಾರ ಗ್ರಾಮದ ದಲಿತ ಕಾಲೋನಿಯಿಂದ ಧಾರ್ಮಿಕ ಮೆರವಣಿಗೆ ಸಾಗುತ್ತಿದ್ದಾಗ ಜಗಳ ಪ್ರಾರಂಭವಾಯಿತು. ದ್ಯಾಮವ್ವ ದೇವಿಯ ಗ್ರಾಮ ಜಾತ್ರೆ ಇದ್ದು, ಸಂಜೆ ವೇಳೆಗೆ ಮೆರವಣಿಗೆ ಏರ್ಪಡಿಸಲಾಗಿತ್ತು.

ದಲಿತ ಕಾಲೋನಿಯಲ್ಲಿ ಮೆರವಣಿಗೆ ಸಾಗುತ್ತಿದ್ದಾಗ ಚಿಕ್ಕಮಕ್ಕಳು ಹಾಗೂ ಯುವಕರು ಮೆರವಣಿಗೆಯ ಜತೆಗೆ ಕುಣಿಯಲು ಮುಂದಾದಾಗ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ, ಜಾತ್ರೆಗೆ  ದಲಿತ ಕುಟುಂಬಗಳು ಸೇರಬಾರದು ಎಂದು ಹೇಳಿದರು. ಇದರಿಂದ  ಎರಡೂ ಕಡೆಯವರಿಗೆ ಉಂಟಾದ ಜಗಳದಿಂದಾಗಿ, ರಾತ್ರಿಯಲ್ಲಿ ಆರೋಪಿ ಗ್ರಾಮಸ್ಥರು  ದಲಿತರ ಮನೆಯನ್ನು ಸುಡಲು ಪ್ರಯತ್ನಿಸಿದರು. ನೆರೆಹೊರೆಯವರು ಸಮಯಕ್ಕೆ ಬಂದು ಯಾವುದೇ ದುರಂತದ ಮೊದಲು ಬೆಂಕಿಯನ್ನು ನಂದಿಸಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

No Comments

Leave A Comment