Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಖ್ಯಾತ ಬಾಲಿವುಡ್ ನಟ ವಿಕ್ರಮ ಗೋಖಲೆ ನಿಧನ!

ಮುಂಬೈ: ಖ್ಯಾತ ಬಾಲಿವುಡ್ ನಟ ವಿಕ್ರಮ ಗೋಖಲೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಕಿರುತೆರೆ ಮತ್ತು ಬಾಲಿವುಡ್‌ನ ಹಿರಿಯ ನಟ ವಿಕ್ರಂ ಗೋಖಲೆ(75) ಪುಣೆಯ ಆಸ್ಪತ್ರೆಯಲ್ಲಿ ಶನಿವಾರ ನಿಧನರಾಗಿದ್ಧಾರೆ ಎಂದು ಅವರ ಕುಟುಂಬ ವರ್ಗ ಸ್ಪಷ್ಟಪಡಿಸಿದೆ. ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಬುಧವಾರ ಸಂಜೆ ಪುಣೆಯ ದೀನನಾಥ್‌ ಮಂಗೇಶ್ಕರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ವಿಕ್ರಮ್ ಗೋಖಲೆ ಅವರನ್ನು ತೀವ್ರನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮಾಧ್ಯಮಗಳಲ್ಲಿ ಅವರು ನಿಧನರಾಗಿದ್ದಾರೆ ಎಂದು ವರದಿ ಮಾಡಲಾಗಿತ್ತು. ಬಳಿಕ ಅವರ ಕುಟುಂಬಸ್ಥರು ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಗೋಖಲೆ ಅವರು ಸಾವನ್ನಪ್ಪಿದ್ದಾರೆ.

ತಮ್ಮ ಸುದೀರ್ಘ ನಟನಾ ವೃತ್ತಿ ಜೀವನದಲ್ಲಿ ಗೋಖಲೆ, ಮರಾಠಿ ಕಿರುತೆರೆ ಮತ್ತು ಹಿಂದಿಯ ಹಲವು ಚಿತ್ರಗಳಲ್ಲಿ ನಟಿಸಿದ್ದು, ಅಮಿತಾಭ್ ಬಚ್ಚನ್ ಅವರ ಅಗ್ನಿಪಥ್, ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಮುಖ್ಯ ಭೂಮಿಕೆಯಲ್ಲಿರುವ ಸಂಜಯ್ ಲೀಲಾ ಬನ್ಸಾಲಿಯವರ ಹಮ್ ದಿಲ್ ದೇ ಚುಕೆ ಸನಮ್ ಮುಂತಾದ ಹಿಟ್ ಚಿತ್ರಗಳಲ್ಲಿ ಗೋಖಲೆ ನಟಿಸಿದ್ದಾರೆ. ಇತ್ತೀಚಿನ, ಮಿಷನ್ ಮಂಗಲ್, ಹಿಚ್ಕಿ, ಐಯ್ಯಾರಿ, ಬ್ಯಾಂಗ್ ಬ್ಯಾಂಗ್, ದೇ ದನಾ ದನ್ ಮತ್ತು ಭೂಲ್ ಭುಲಯ್ಯಾ ಮತ್ತು ಅವ್ರೋಧ್ ಚಿತ್ರಗಳಲ್ಲೂ ಅವರು ನಟಿಸಿದ್ದರು.

1971ರಲ್ಲಿ ಅಮಿತಾಬ್ ಬಚ್ಚನ್ ಅವರ ಪರ್ವಾನಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಗೋಖಲೆ, 2010ರಲ್ಲಿ ಮರಾಠಿಯ ಅನುಮತಿ ಚಿತ್ರದ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು. ಮರಾಠಿಯ ಆಘಾತ್ ಚಿತ್ರವನ್ನು ನಿರ್ದೇಶಿಸಿದ್ದರು. ಈ ವರ್ಷ ತೆರೆಕಂಡ ಮರಾಠಿಯ ಗೋದಾವರಿ ಮತ್ತು ಹಿಂದಿಯ ನಿಕಮ್ಮಾ ಅವರು ಅಭಿನಯದ ಕೊನೆಯ ಚಿತ್ರಗಳಾಗಿವೆ.

No Comments

Leave A Comment