ಗುಜರಾತ್: ಗಾಂಧಿನಗರ – ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
ಗಾಂಧಿನಗರ: ಗುಜರಾತ್ ನಗಾಂಧಿನಗರ ಮತ್ತು ಮುಂಬೈ ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಶುಕ್ರವಾರ ಪ್ರಧಾನಿ ಮೋದಿ ಅವರು ಚಾಲನೆ ನೀಡಿದರು.
ಇಂದು ಬೆಳಗ್ಗೆ 10:30ರ ಸುಮಾರಿಗೆ ಗಾಂಧಿನಗರದ ರಾಜಧಾನಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ನಂತರ ಅವರು ಅಹಮದಾಬಾದ್‌ನ ಗಾಂಧಿನಗರ ಮತ್ತು ಕಲುಪುರ್ ರೈಲು ನಿಲ್ದಾಣದ ನಡುವೆ ಪ್ರಯಾಣಿಕರೊಟ್ಟಿಗೆ ಪ್ರಯಾಣ ಬೆಳೆಸಿದರು.
ಮಹಾರಾಷ್ಟ್ರ ಮತ್ತು ಗುಜರಾತ್‌ನ ರಾಜಧಾನಿ ನಗರಗಳನ್ನು ಸಂಪರ್ಕಿಸುವ ಈ ರೈಲು ದೇಶದ ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆಗಿದೆ. ಮೊದಲ ರೈಲು ಹೊಸದಿಲ್ಲಿ-ವಾರಣಾಸಿ ಮಾರ್ಗದಲ್ಲಿ ಪ್ರಾರಂಭಿಸಿದರೆ, ಎರಡನೆಯದು ಹೊಸದಿಲ್ಲಿ-ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಮಾರ್ಗದಲ್ಲಿ ಪ್ರಾರಂಭವಾಗಿದೆ.
ಈ ರೈಲು ಪ್ರಯಾಣಿಕರಿಗೆ ವಿಮಾನದಂತಹ ಪ್ರಯಾಣದ ಅನುಭವ ನೀಡಲಿದೆ ಮತ್ತು ಕವಚ್ ತಂತ್ರಜ್ಞಾನ ಸೇರಿದಂತೆ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರೈಲು ಆಗಿದ್ದು, ರೈಲುಗಳ ನಡುವೆ ಅಪಘಾತ ತಪ್ಪಿಸುವ ವ್ಯವಸ್ಥೆ ಇದೆ.
ಗಾಂಧಿನಗರ-ಮುಂಬೈ ವಂದೇ ಭಾರತ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ತನ್ನ ವಾಣಿಜ್ಯ ಸಂಚಾರವನ್ನು ಅಕ್ಟೋಬರ್ 1 ರಿಂದ ಪ್ರಾರಂಭಿಸಲಿದೆ. ಇದು ಭಾನುವಾರ ಹೊರತುಪಡಿಸಿ ವಾರದ ಆರು ದಿನ ಕಾರ್ಯನಿರ್ವಹಿಸುತ್ತದೆ. ರೈಲು ಮುಂಬೈ ಸೆಂಟ್ರಲ್ ನಿಲ್ದಾಣದಿಂದ ಬೆಳಗ್ಗೆ 6:10ಕ್ಕೆ ಹೊರಟು ಮಧ್ಯಾಹ್ನ 12:30ಕ್ಕೆ ಗಾಂಧಿನಗರ ತಲುಪಲಿದೆ. ಹಿಂದಿರುಗುವ ಪ್ರಯಾಣಕ್ಕಾಗಿ, ರೈಲು ಗಾಂಧಿನಗರದಿಂದ ಮಧ್ಯಾಹ್ನ 2:05 ಕ್ಕೆ ಹೊರಟು ಮುಂಬೈ ಸೆಂಟ್ರಲ್ಗೆ ರಾತ್ರಿ 8:35 ಕ್ಕೆ ತಲುಪುತ್ತದೆ.