ಮತ್ತೋರ್ವ ಶಂಕಿತ ಉಗ್ರ ಪೊಲೀಸರ ವಶ : ಅಜ್ಞಾತ ಸ್ಥಳದಲ್ಲಿ ಆತನ ವಿಚಾರಣೆ
ಮಂಗಳೂರು: ಇಬ್ಬರು ಶಂಕಿತ ಉಗ್ರರನ್ನು ಶಿವಮೊಗ್ಗದಲ್ಲಿ ಬಂಧಿಸಿದ ಬೆನ್ನಲ್ಲೇ ಮತ್ತೋರ್ವ ಶಂಕಿತ ಉಗ್ರನನ್ನು ಪೊಲೀಸರು ಮಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ.
ಮಂಗಳೂರು ಪೊಲೀಸರು ಅನ್ಸರ್ ಎಂಬಾತನನ್ನು ಮಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಚಾಕು ಇರಿತ ಪ್ರಕರಣದ ವಿಚಾರಣೆ ವೇಳೆ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ಯುಎಪಿಎ ಕಾಯ್ದೆಯಡಿ ಬಂಧಿಸಲಾಗಿದೆ.
ಮಂಗಳವಾರ ನ್ಯಾಯಾಲಯಕ್ಕೆ ಇಬ್ಬರನ್ನು ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗೆ ನ್ಯಾಯಾಲಯ ಆರೋಪಿಗಳನ್ನು ಸೆಪ್ಟೆಂಬರ್ 29ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಅನ್ಸರ್ ಗೆ ಶಿವಮೊಗ್ಗದಲ್ಲಿ ಬಂಧಿತನಾಗಿರುವ ಶಂಕಿತ ಉಗ್ರ ಸಯ್ಯದ್ ಯಾಸೀನ್ ಅಲಿಯಾಸ್ ಬೈಲು ಹಾಗೂ ಮಾಝ್ ಮುನೀರ್ ಅಹ್ಮದ್ ಜೊತೆ ನಂಟು ಹೊಂದಿದ್ದ ಎನ್ನಲಾಗಿದೆ.
ಪೊಲೀಸರು ಅನ್ಸರ್ ನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ ಎಂದು ಮಾಹಿತಿ ತಿಳಿಯಲಾಗಿದೆ.