Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಮೈಸೂರು ದಸರಾ ಮಹೋತ್ಸವ 2022: ಯುವ ಸಂಭ್ರಮಕ್ಕೆ ಚಾಲನೆ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ 9‌ ದಿನಗಳ ಕಾಲ ನಡೆಯಲಿರುವ ಯುವ ಸಂಭ್ರಮಕ್ಕೆ ಶುಕ್ರವಾರ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ನಟ ಡಾಲಿ ಧನಂಜಯ್ ಅವರು ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ  ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು, ಕೋವಿಡ್ ಅಲೆಯು ಗಣನೀಯವಾಗಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ  ವಿಶ್ವವಿಖ್ಯಾತ ನಾಡಹಬ್ಬ ದಸರಾವನ್ನು ಆಚರಣೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ನೇತೃತ್ವದ ರಾಜ್ಯ ಸರ್ಕಾರ  ಮಾಡಲು ತೀರ್ಮಾನ ಮಾಡಿದ್ದರಿಂದ ಈ ಬಾರಿಯ ದಸರಾವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ ಎಂದರು.

ಯುವ ಸಂಭ್ರಮಕ್ಕೆ 100ಕ್ಕೂ ಹೆಚ್ಚಿನ ಕಾಲೇಜುಗಳ ವಿದ್ಯಾರ್ಥಿಗಳು ಬಂದಿದ್ದು, ಸಂತೋಷದಿಂದ ಭಾಗವಹಿಸಿ ಪ್ರತಿಭೆಯನ್ನು ತೋರಿಸಿಕೊಳ್ಳಲು ಸುವರ್ಣ ಅವಕಾಶ. ಹೀಗಾಗಿ ಇಂತಹ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಕೇಂದ್ರಬಿಂದುವಾದ ಡಾಲಿ ಧನಂಜಯ್ ಅವರು ಮಾತನಾಡಿ, ಇಂತಹ ಹಬ್ಬಗಳು ಪ್ರತಿನಿತ್ಯ ಇರಬೇಕು. ಹಬ್ಬಗಳನ್ನು ಜಾತಿ, ಮತ ಮರೆತು ಪ್ರತಿಯೊಬ್ಭರು ಆಚರಿಸಬೇಕು. ಹಬ್ಬಗಳಲ್ಲಿ ಗಲಾಟೆ ಇರಬಾರದು. ನಮ್ಮ ಗುರಿ ಮುಟ್ಟಿ ಸಾಧನೆ ಮಾಡಿದಾಗ ಇಂತಹ ಹಬ್ಬಕ್ಕೆ ಇನ್ನಷ್ಟು ಮೆರಗು ಬರುತ್ತದೆ. ಸಾಧನೆ ಮಾಡಲು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಯಾವುದೆ ಕಾರಣಕ್ಕೆ ಹಿಂದೆ ಸರಿಯಬಾರದು ಎಂದು ಕಿವಿಮಾತು ಹೇಳಿದರು.

ನಾನು ಇದೇ ಗಂಗೋತ್ರಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಯುವ ದಸರಾ ಇಲ್ಲೆಯೇ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ನಾನೂ ಸಹ ಕಾರ್ಯಕ್ರಮಕ್ಕೆ ಬಂದು ಕುಣಿದಾಡಿದ ನೆನಪುಗಳು ಈಗಲೂ ಸಹ ಇವೆ. ನಮ್ಮ ಮನಸ್ಥಿತಿಯನ್ನು ನಾವೆ ನಿಯಂತ್ರಣ ಮಾಡಿಕೊಳ್ಳಬೇಕು. ಸ್ವಾತಂತ್ರ್ಯವಾಗಿ ಆಲೋಚನೆ ಮಾಡುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.

ಡಾಲಿ, ಡಾಲಿ,ಡಾಲಿ:- ನಟ ಡಾಲಿ ಧನಂಜಯ್ ವೇದಿಕೆಯತ್ತ ಬರುತ್ತಿದ್ದಂತೆ ಅಭಿಮಾನಿಗಳು ನಟ ಧನಂಜಯ್ ಅವರತ್ತ ಕೈ ಬಿಸಿ ಡಾಲಿ ಧನಂಜಯ್ ಅವರನ್ನು ಬರಮಾಡಿಕೊಂಡರು. ಬಳಿ ಧನಂಜಯ್ ಅವರು ಅಭಿಮಾನಿಗಳ ಆಸೆಯಂತೆ ಟಗರು, ಬಡವ ರಾಸ್ಕಲ್, ಮಾನ್ಸೂನ್ ರಾಗ ಚಿತ್ರದ ಡೈಲಾಗ್  ಹೊಡೆದು ಅಭಿಮಾನಿಗಳನ್ನು ರಂಜಿಸಿದರು.

ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಶಿವಕುಮಾರ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಸೇರಿದಂತೆ ಹಲವರು ಹಾಜರಿದ್ದರು.

No Comments

Leave A Comment