Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಬೆಳಗಾವಿ ಕ್ವಾರಿ ಸ್ಫೋಟದಿಂದ ಹರಿನಾಳ ಅಣೆಕಟ್ಟಿಗೆ ಅಪಾಯ, ಜೀವ ಕೈಯಲ್ಲಿ ಹಿಡಿದಿರುವ ನಿವಾಸಿಗಳು!

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕ್ವಾರಿ ಸ್ಫೋಟದಿಂದ ಸ್ಥಳೀಯ  ಹರಿನಾಳ ಅಣೆಕಟ್ಟಿಗೆ ಅಪಾಯ ಎದುರಾಗಿದ್ದು, ಸ್ಥಳೀಯ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಬದುಕು ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಿಕಟ್ಟಿ ಮತ್ತು ಗಣಿಕೊಪ್ಪ ಗ್ರಾಮಗಳ ಕಲ್ಲು ಪುಡಿ ಮಾಡುವ ಕ್ವಾರಿ ಘಟಕಗಳಲ್ಲಿ ಜಿಲೆಟಿನ್ ಸ್ಫೋಟಗೊಳ್ಳುತ್ತಿದ್ದು, ಗ್ರಾಮಸ್ಥರು ಮತ್ತು ಪ್ರಾಣಿಗಳ ಜೀವಕ್ಕೆ ಅಪಾಯವನ್ನುಂಟುಮಾಡುತ್ತಿದೆ. ಮಾತ್ರವಲ್ಲದೆ ಪರಿಸರ ಮತ್ತು ಸಮೀಪದಲ್ಲಿರುವ ಜಲಸಂಗ್ರಹಾಗಾರಕ್ಕೂ ಅಪಾಯವನ್ನುಂಟು ಮಾಡಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿಗದಿಪಡಿಸಿದ ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ಉಲ್ಲಂಘಿಸಿ ಸ್ಫೋಟಗಳನ್ನು ನಡೆಸಲಾಗಿದೆ ಎನ್ನಲಾದ ಸ್ಫೋಟಗಳ ಪ್ರಭಾವದಿಂದಾಗಿ ಘಟಕಗಳ ಸಮೀಪವಿರುವ ಅನೇಕ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಘಟಕದ ಸಮೀಪ ನಾವಲಗಟ್ಟಿ ಮತ್ತು ತಿಗಡಿ ಗ್ರಾಮಗಳ ನಡುವೆ ಇರುವ ಹರಿನಾಳ ಅಣೆಕಟ್ಟು ಕೂಡ ಅಪಾಯದ ಭೀತಿ ಎದುರಿಸುತ್ತಿದೆ.

ತಿಗಡಿ ಗ್ರಾಮದ ಹರಿನಾಳ ಅಣೆಕಟ್ಟು ಭೂಮಿಯ 5-ಕಿಮೀ ವ್ಯಾಪ್ತಿಯೊಳಗೇ ಇದ್ದು, ಇದು ಸ್ಫೋಟದ ಚಟುವಟಿಕೆಗಳಿಂದಾಗಿ ಕಂಪನಗಳನ್ನು ಅನುಭವಿಸುತ್ತಿದೆ. 40 ವರ್ಷಗಳ ಹಿಂದೆ ನಿರ್ಮಿಸಿದ ಅಣೆಕಟ್ಟು ಸುತ್ತಮುತ್ತಲಿನ 20 ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರಿನ ಮೂಲವಾಗಿದೆ.

ಈ ಕುರಿತು ಮರಿಕಟ್ಟಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ವಿಠ್ಠಲ್ ತಳವಾರ ಮಾತನಾಡಿ, ಅಣೆಕಟ್ಟಿನ ಕೆಳಭಾಗದಲ್ಲಿರುವ ತಿಗಡಿ, ಕಲ್ಲೂರು, ಸಂಪಾಂವ್ ಮತ್ತು ಇತರ ಕೆಲವು ಗ್ರಾಮಗಳು ಅಪಾಯದ ಅಂಚಿನಲ್ಲಿವೆ. ಕಲ್ಲಿನ ದೂಳು ಬೆಳೆಗಳ ಮೇಲೆ ಹರಡಿ ರೈತರಿಗೆ ನಷ್ಟ ಉಂಟು ಮಾಡುತ್ತಿರುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಅನೇಕ ರೈತರು ಕೃಷಿ ಮಾಡುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಲೋಕೇಶ್ ಕುಮಾರ್ ಮಾತನಾಡಿ, ಕಲ್ಲು ಪುಡಿ ಮಾಡುವ ಘಟಕಗಳಲ್ಲಿ ನಿಯಮ ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದು ನನ್ನ ಗಮನಕ್ಕೆ ಬಂದಿದೆ. ಈ ಸಂಬಂಧ ಕಾರ್ಯಪಡೆ ಸಭೆಯನ್ನೂ ನಡೆಸಲಾಯಿತು. ಮರಿಕಟ್ಟಿ ಮತ್ತು ಗಾಣಿಕೊಪ್ಪ ಗ್ರಾಮಗಳ 13 ಕಲ್ಲು ಪುಡಿ ಘಟಕಗಳಿಗೆ ನೋಟಿಸ್‌ ನೀಡಿದ್ದೇವೆ. ಅಗತ್ಯ ಸ್ಪಷ್ಟನೆ ನೀಡಲು ವಿಫಲವಾದರೆ ಘಟಕಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುವುದು’ ಎಂದು ಹೇಳಿದರು.

No Comments

Leave A Comment