ಕೇಜ್ರಿವಾಲ್ ಗೆ ಸಂಕಷ್ಟ: 1,000 ಲೋ ಫ್ಲೋರ್ ಬಸ್‌ಗಳ ಖರೀದಿಯಲ್ಲಿ ಭ್ರಷ್ಟಾಚಾರ; ಸಿಬಿಐ ತನಿಖೆಗೆ ಎಲ್‌ಜಿ ಅನುಮೋದನೆ
ನವದೆಹಲಿ: ಮದ್ಯ ನೀತಿಯಲ್ಲಿನ ಭ್ರಷ್ಟಾಚಾರದ ಆರೋಪದ ನಂತರ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಡಿಟಿಸಿಯಿಂದ 1,000 ಲೋ ಫ್ಲೋರ್ ಬಸ್‌ಗಳ ಖರೀದಿಯಲ್ಲಿನ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಗೆ ನಡೆಸಲು ಅನುಮೋದಿಸಿದ್ದಾರೆ.
ಈ ವರ್ಷ ಜೂನ್ 9ರಂದು ರಾಜ್ಯಪಾಲ ವಿಕೆ ಸಕ್ಸೇನಾ ಬಂದ ದೂರಿನಲ್ಲಿ, ದೆಹಲಿ ಸಾರಿಗೆ ಸಂಸ್ಥೆ(ಡಿಟಿಸಿ) ಸಾರಿಗೆ ಸಚಿವರನ್ನು ಪೂರ್ವ ಯೋಜಿತವಾಗಿ ಟೆಂಡರ್ ಮತ್ತು ಖರೀದಿಗೆ ಸಂಬಂಧಿಸಿದ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದೆ ಎಂದು ಆರೋಪಿಸಲಾಗಿದೆ.
ಟೆಂಡರ್‌ಗೆ ಬಿಡ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಆಗಿ ಡಿಐಎಂಟಿಎಸ್‌ನ ನೇಮಕವನ್ನು ಅಕ್ರಮಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 2019ರ ಜುಲೈನಲ್ಲಿ 1,000 ಲೋ ಫ್ಲೋರ್ BS-IV ಮತ್ತು BS-VI ಬಸ್‌ಗಳ ಖರೀದಿಗೆ BID ಗಾಗಿ ಬಿಡ್ಡಿಂಗ್ ಒಪ್ಪಂದದಲ್ಲಿ ಅಕ್ರಮಗಳು ನಡೆದಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇಷ್ಟೇ ಅಲ್ಲ, 2020ರ ಮಾರ್ಚ್‌ನಲ್ಲಿ ಲೋ ಫ್ಲೋರ್ ಬಿಎಸ್-6 ಬಸ್‌ಗಳ ಖರೀದಿ ಮತ್ತು ವಾರ್ಷಿಕ ನಿರ್ವಹಣೆಯ ಗುತ್ತಿಗೆಯ ಎರಡನೇ ಬಿಡ್‌ನಲ್ಲಿಯೂ ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾಗಿದೆ. ದೆಹಲಿ ಸರ್ಕಾರದ ಇಲಾಖೆಗಳ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳಲು ಜುಲೈ 22ರಂದು ದೂರನ್ನು ಮುಖ್ಯ ಕಾರ್ಯದರ್ಶಿಗೆ ಕಳುಹಿಸಲಾಗಿತ್ತು. ಆ.19ರಂದು ಮುಖ್ಯ ಕಾರ್ಯದರ್ಶಿ ವರದಿ ಸಲ್ಲಿಸಿದ್ದು ಇದರಲ್ಲಿ ಕೆಲವು ‘ಅಕ್ರಮ’ಗಳನ್ನು ಎತ್ತಿ ತೋರಿಸಲಾಗಿದೆ. ಇದಾದ ನಂತರ ರಾಜ್ಯಪಾಲರು ಸಿಬಿಐಗೆ ದೂರನ್ನು ಕಳುಹಿಸಿದ್ದಾರೆ.
ಸಿಬಿಐ ತನಿಖೆ ಶುರು
ಸಿಬಿಐ ಈ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಆಗಸ್ಟ್ ತಿಂಗಳಿಂದಲೇ ಪ್ರಾರಂಭಿಸಿದೆ. ಅದೇ ಸಮಯದಲ್ಲಿ, ಕೇಜ್ರಿವಾಲ್ ಸರ್ಕಾರವು ಈ ವಿಷಯದಲ್ಲಿ ಕ್ಲೀನ್ ಚಿಟ್ ಪಡೆದಿದೆ ಎಂದು ಹೇಳಿಕೊಂಡಿದೆ. ಬಿಜೆಪಿ ಇದನ್ನು ಅನಗತ್ಯ ವಿಷಯವನ್ನಾಗಿ ಮಾಡುತ್ತಿದೆ. 2021ರಲ್ಲಿ ದಾಖಲಾಗಿರುವ ದೂರಿನ ಬಗ್ಗೆ ಇನ್ನೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಬಿಜೆಪಿ ಹೇಳಿದೆ.