ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಹುದ್ದೆಗಳಿಗೂ ಗುಲಾಂ ನಬಿ ಆಜಾದ್ ಗುಡ್ ಬೈ: ಕಾಂಗ್ರೆಸ್ ಗೆ ಭಾರೀ ಹಿನ್ನಡೆ!
ನವದೆಹಲಿ: ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ವ್ಯವಸ್ಥಿತ ಬದಲಾವಣೆಗಳನ್ನು ಬಯಸಿದ ಜಿ 23 ನಾಯಕರ ಗುಂಪಿನ ಸದಸ್ಯರಾಗಿದ್ದ ಗುಲಾಂ ನಬಿ ಆಜಾದ್ ಅವರು ಕೆಲವು ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಆನಂದ್ ಶರ್ಮಾ ಅವರು ಪಕ್ಷದ ಪ್ರಮುಖ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನಗಳ ನಂತರ ಆಜಾದ್ ರಾಜೀನಾಮೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಅವರು ಆರೋಗ್ಯದ ಕಾರಣ ಮುಂದಿಟ್ಟು ಜಮ್ಮು ಮತ್ತು ಕಾಶ್ಮೀರ ಘಟಕದ ಪದಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಈ ಮೂಲಕ ಪಕ್ಷದ ಉನ್ನತ ನಾಯಕತ್ವದ ಕಾರ್ಯವೈಖರಿ ಬಗ್ಗೆ ತಮ್ಮ ಅಸಮಾಧಾನ ಮತ್ತೆ ಹೊರಹಾಕಿದ್ದರು.
ಪಕ್ಷದ ನಾಯಕತ್ವ ಕಾರ್ಯನಿರ್ವಹಿಸುತ್ತಿರುವ ರೀತಿ ಬದಲಾಗಬೇಕು ಎಂದು ಆಗ್ರಹಿಸಿ ಪತ್ರ ಬರೆದಿದ್ದ ಜಿ-23 ಸಮಿತಿಯಲ್ಲಿ ಗುಲಾಂ ನಬಿ ಆಜಾದ್ ಸಹ ಇದ್ದರು. ಗುಲಾಂ ನಬಿ ಆಜಾದ್ ಅವರನ್ನು ಜಮ್ಮು ಕಾಶ್ಮೀರ ಕಾಂಗ್ರೆಸ್ ಸಮಿತಿಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ನೇಮಕಾತಿ ಆದೇಶ ಹೊರಬಿದ್ದ ಕೆಲಹೊತ್ತಿನಲ್ಲಿಯೇ ಅವರು ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದರು. ಪಕ್ಷದ ಜಮ್ಮು ಕಾಶ್ಮೀರ ರಾಜಕೀಯ ವ್ಯವಹಾರ ಸಮಿತಿಗೂ ಆಜಾದ್ ರಾಜೀನಾಮೆ ನೀಡಿದ್ದರು.
ಜಮ್ಮು ಕಾಶ್ಮೀರ ಕಾಂಗ್ರೆಸ್ ಸಮಿತಿಗೆ ಗುಲಾಂ ನಬಿ ಆಜಾದ್ ಅವರ ಆಪ್ತ ಗುಲಾಂ ಅಹ್ಮದ್ ಮಿರ್ ಈ ಹಿಂದೆ ಅಧ್ಯಕ್ಷರಾಗಿದ್ದರು. ಜುಲೈ 6ರಂದು ಮಿರ್ ಸಲ್ಲಿಸಿದ್ದ ರಾಜೀನಾಮೆಯನ್ನು ಸೋನಿಯಾ ಗಾಂಧಿ ಅಂಗೀಕರಿಸಿದ್ದರು.
ತಮ್ಮ ರಾಜೀನಾಮೆ ಪತ್ರದಲ್ಲಿ ಅವರು ಗಾಂಧಿಗಳು ಮತ್ತು ಸಂಘಟನಾ ನಾಯಕತ್ವದ ವಿರುದ್ಧ ಹರಿಹಾಯ್ದಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕರನ್ನು ಮೂಲೆ ಗುಂಪು ಮಾಡಿರುವುದು ಮತ್ತು ‘ಅನನುಭವಿ ಭಟ್ಟಂಗಿಗಳ ಗುಂಪಿನ’ ಒಡನಾಟವನ್ನು ಹೆಚ್ಚಿಸಿಕೊಂಡಿರುವುದು ತಮ್ಮ ನಿರ್ಗಮನ ನಿರ್ಧಾರಕ್ಕೆ ಕಾರಣ ಎಂದು ಹೇಳಿದ್ದಾರೆ.