ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ನಿತೀಶ್ ಕುಮಾರ್; ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬುಧವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಿದ್ದು, ಮಹಾಘಟಬಂಧನ ಮೈತ್ರಿಕೂಟ ಸರ್ಕಾರ ಭದ್ರವಾಗಿದೆ.
ಇಂದು ನಡೆದ ವಿಶೇಷ ಅಧಿವೇಶನದಲ್ಲಿ ನಿತೀಶ್ ಕುಮಾರ್ ಅವರು ತಮ್ಮ ನೇತೃತ್ವದ ಮಹಾಘಟಬಂಧನ ಸರ್ಕಾರದ ಬಹುಮತ ಸಾಬೀತಪಡಿಸಿದರು.
ಬಳಿಕ ಮಾತನಾಡಿದ ಜನತಾ ದಳ(ಯುನೈಟೆಡ್) ಮುಖ್ಯಸ್ಥ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅವರು, ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ವೇಳೆ ಬಿಜೆಪಿ ಶಾಸಕರು ಸದನದಿಂದ ಹೊರ ನಡೆದರು.
ನಿತೀಶ್ ಕುಮಾರ್ ಸಾರಥ್ಯದ ಮಹಾಘಟಬಂಧನ ಸರ್ಕಾರದ ವಿಶ್ವಾಸಮತ ಯಾಚನೆಗೂ ಮುನ್ನ ಬಿಹಾರ ವಿಧಾನಸಭೆ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಶಾಸಕ ವಿಜಯ್ ಕುಮಾರ್ ಸಿನ್ಹಾ ರಾಜೀನಾಮೆ ನೀಡಿದ್ದರು.