ಉದ್ಯಾವರದ ಬಟ್ಟೆ ಉದ್ಯಮಿಗಳ ದಾಖಲೆ ಪತ್ರ ಕಳವು ಹಣಕ್ಕಾಗಿ ಬ್ಲಾಕ್ ಮೈಲ್- ಪಿಸ್ತೂಲ್ ತೋರಿಸಿ ಬೆದರಿಕೆ ಒಡ್ಡಿದ ಉಡುಪಿ ಬೈಲೂರಿನ ಪಾ೦ಡುರ೦ಗ ಕಿಣಿಯ ವಿರುದ್ಧ ದೂರು ದಾಖಲು
ಉಡುಪಿ:ಆ.16. ಉದ್ಯಮಿಯೊಬ್ಬರಿಗೆ ಸೇರಿದ ದಾಖಲೆಗಳನ್ನು ಕದ್ದು ಬೆದರಿಸಿ, ಹಣ ಸುಲಿಗೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿ ಉದ್ಯಾವರದ ಉದ್ಯಮಿ ವೀರೇಂದ್ರ ಹೆಗ್ಡೆ ಅವರು ಬೈಲೂರು ನಿವಾಸಿ ಪಾಂಡುರಂಗ ಕಿಣಿ ವಿರುದ್ಧ ಮಂಗಳೂರಿನ ಬರ್ಕೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕೆಲವು ವರ್ಷಗಳ ಹಿಂದೆ ಪಾಂಡುರಂಗ ಕಿಣಿ, ವೀರೇಂದ್ರ ಹೆಗ್ಡೆಅವರ ಬಳಿ ಹಣದ ಸಹಾಯ ಕೇಳಿಕೊಂಡು ಬಂದಿದ್ದು, ಆ ನಂತರದ ದಿನಗಳಲ್ಲಿ ವೀರೇಂದ್ರ ಹೆಗ್ಡೆ ಅವರೊಂದಿಗೆ ಮಿತೃತ್ವ ಬೆಳೆಸಿಕೊಂಡಿದ್ದ. ಈತ ಇತರ ಮೂವರು ಆರೋಪಿಗಳೊಂದಿಗೆ ಸೇರಿಸಿಕೊಂಡು ಬೆದರಿಸಿ, ಹಣ ಲಪಟಾಯಿಸಲು ಯೋಜನೆ ರೂಪಿಸಿದ್ದು, ಉದ್ಯಮಿಯ ಜವಳಿ ಕಟ್ಟಡದ ಬಗ್ಗೆ ವಿವಿಧ ಸರಕಾರಿ ಇಲಾಖೆಗಳಿಗೆ ಸುಳ್ಳು ಅರ್ಜಿಗಳನ್ನು ನೀಡಿದ್ದಾರೆ. ಮಾತ್ರವಲ್ಲದೆ ಈ ಅರ್ಜಿಗಳನ್ನು ಹಿಂಪಡೆಯಲು 2 ಕೋ.ರೂ. ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಹಾಗೂ ತಮ್ಮ ಸ್ನೇಹಿತರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ವೀರೇಂದ್ರ ಹೆಗ್ಡೆ ದೂರಿನಲ್ಲಿ ಆರೋಪಿಸಿದ್ದಾರೆ.
ಬೆಂಗಳೂರಿನ ಆರೋಪಿಗಳೊಂದಿಗೆ ಶಾಮೀಲಾಗಿಸಿಕೊಂಡು ಬೆಂಗಳೂರಿಗೆ ಕರೆಸಿಕೊಂಡ ಆರೋಪಿಗಳು ಪಿಸ್ತೂಲ್ ತೋರಿಸಿ, ಬೆದರಿಸಿದ್ದು, 5 ಕೋ.ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇಲ್ಲದಿದ್ದಲ್ಲಿ ಉದ್ಯಾವರದ ಕಟ್ಟಡವನ್ನು ವಿವಿಧ ಇಲಾಖೆಗಳ ಮೂಲಕ ನೆಲಸಮಗೊಳಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ವೀರೇಂದ್ರ ಹೆಗ್ಡೆ ಅವರ ವಿರುದ್ಧ ವಿವಿಧ ಇಲಾಖೆಗೆ ನೀಡಿದ ಸುಳ್ಳು ದೂರಿನ ವಿರುದ್ಧ ಉಡುಪಿ ನ್ಯಾಯಾಲಯದಲ್ಲಿ ಮಾನನಷ್ಟದ ಖಾಸಗಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.