Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಸಿಎಂ ಬೊಮ್ಮಾಯಿಯಿಂದ 75 ಎಲೆಕ್ಟ್ರಿಕ್ ಬಸ್‌ಗಳ ಲೋಕಾರ್ಪಣೆ!

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು 75 ಎಲೆಕ್ಟ್ರಿಕ್ ಬಸ್ಸುಗಳನ್ನು ಲೋಕಾರ್ಪಣೆ ಮಾಡಿದರು.

ವಿಧಾನಸೌಧದ ಮೆಟ್ಟಿಲುಗಳ ಮುಂಭಾಗ ಬಸ್ ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದ ಅವರು, ಸಾರಿಗೆ ಅಭಿವೃದ್ಧಿಯ ಅಂಗವಾಗಿದೆ. ಸಾರಿಗೆ ಇಲ್ಲದೆ ನಾವು ಜೀವನವನ್ನು ಯೋಚನೆ ಮಾಡೋಕು ಆಗಲ್ಲ. ಸರ್ಕಾರಕ್ಕೆ ಸಾರಿಗೆ ಬಗ್ಗೆ ಚಿಂತನೆ ಅವಶ್ಯಕತೆ ಇದೆ. ಗ್ರಾಮೀಣ ಸಾರಿಗೆ ಪ್ರತಿಯೊಂದು ಹಳ್ಳಿಗೂ ಮುಟ್ಟಬೇಕಾಗುತ್ತದೆ. ನಗರದಲ್ಲಿ ಒಂದು ಕಿ.ಮಿ ಕಡಿಮೆ ಇದ್ದರೂ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು.

ಬಿಎಂಟಿಸಿಗೆ 25 ವರ್ಷ ತುಂಬಿದೆ. ಬಸ್‌ಗಳ ಮೆಂಟೇನೆನ್ಸ್‌ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಮೊದಲಿಗೆ ಲಾಭದಾಯಕವಾಗಿದ್ದ ಬಿಎಂಟಿಸಿ ಕೋವಿಡ್‌ನಿಂದ ನಷ್ಟಕ್ಕೀಡಾಗಿದೆ. ಅದನ್ನು ಮತ್ತೆ ಮೇಲೆತ್ತುವ ಕೆಲಸ ಸರ್ಕಾರ ಮಾಡುತ್ತಿದೆ. ಬಿಎಂಟಿಸಿಯ ೫ ಸಾವಿರ ಗಾಡಿಗಳು ಬೆಂಗಳೂರಿನಲ್ಲಿ ಓಡಾಡುತ್ತದೆ. ೧.೨೫ ಲಕ್ಷ ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ ಇನ್ನೂ ಮೂರುವರ್ಷದಲ್ಲಿ ಜನಸಂಖ್ಯೆಗಿಂತ ಮೂರರಷ್ಟು ಗಾಡಿಗಳಿರುತ್ತದೆ. ಬೆಂಗಳೂರು ಜನಸಂಖ್ಯೆ ಬೆಳೆಯುತ್ತಿದೆ. ಬೆಂಗಳೂರಿಗರ ಸಾರಿಗೆ ವ್ಯವಸ್ಥೆಯ ಯೋಜನೆ ರೂಪಿಸಬೇಕಿದೆ. ಬೆಂಗಳೂರಿನ ಬೆಳವಣಿಗೆ ಎಲ್ಲಾ ದಿಕ್ಕುಗಳಲ್ಲು ಆಗುವಂತೆ ಸರ್ಕಾರ ಮಾಡಬೇಕಾಗುತ್ತದೆ. ಇಷ್ಟರಲ್ಲೇ ಬೆಂಗಳೂರಿನ ಮೊಬಿಲಿಟಿ ಪ್ಲಾನ್ ಬರುತ್ತದೆ ಎಂದು ತಿಳಿಸಿದರು.

ಸರ್ಕಾರ ಸಂಪೂರ್ಣವಾಗಿ ಬಿಎಂಟಿಸಿ ಜೊತೆ ಇದೆ. ಬಿಎಂಟಿಸಿ ಅಭಿವೃದ್ಧಿ ಸಾಕಷ್ಟು ಅವಶ್ಯಕತೆ ಇದೆ. ಕಳೆದ ಮೂರು ವರ್ಷದಲ್ಲಿ 3 ಸಾವಿರ ಕೋಟಿಯನ್ನು ನಮ್ಮ ಸರ್ಕಾರ ಸಾರಿಗೆಗೆ ನೀಡಿದೆ. ಸರ್ಕಾರ ಹೀಗೆ ಎಲ್ಲವನ್ನೂ ನಡೆಸೋದಕ್ಕೆ ಆಗಲ್ಲ. ಹಂತಹಂತವಾಗಿ ಶ್ರೀನಿವಾಸ್‌ಮೂರ್ತಿಯವರ ವರದಿಯನ್ನು ಜಾರಿ ಮಾಡ್ತೀವಿ. ಸಾರಿಗೆ ಇಲಾಖೆ ಮತ್ತು ಇಂಧನ ಇಲಾಖೆಯನ್ನು ಪುನರ್‌ರಚನೆ ಮಾಡುವ ಅವಶ್ಯಕತೆ ಇದೆ. ಸರ್ಕಾರ ಆ ನಿಟ್ಟಿನಲ್ಲಿ ಕಾರ್ಯ ರೂಪಿಸುತ್ತಿದೆ. ಸಮಸ್ಯೆಗಳನ್ನು ಎದುರಿಸಿ ಪರಿಹಾರ ಕೊಡುವುದು ನನ್ನ ಸರ್ಕಾರದ ಧ್ಯೇಯ ಎಂದರು.

ನನ್ನ ಸರ್ಕಾರದಲ್ಲಿ 5 ಸಾವಿರ ಕೋಟಿ ಆದಾಯ ಕಡಿಮೆ ಇತ್ತು. ಬಜೆಟ್ ಗಾತ್ರವನ್ನು ಕಡಿಮೆ ಮಾಡಬೇಕು ಎಂದು ಅಧಿಕಾರಿಗಳು ಹೇಳಿದ್ದರು. ಯಾವ ಯಾವ ಕ್ಷೇತ್ರವನ್ನು ಮುಟ್ಟಬೇಕು ಎಂದು ನಾನು ಅಧಿಕಾರಿಗಳಿಗೆ ಸೂಚಿಸಿದ್ದೆ. ಅದರಿಂದ ನಾವು ನಮ್ಮ ಟಾರ್ಗೆಟ್ ಮೀರಿ 15 ಸಾವಿರ ಕೋಟಿ ಹೆಚ್ಚುವರಿ ಪಡೆದಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು. ಈ ವೇಳೆ ಸಾರಿಗೆ ಸಚಿವ ಶ್ರೀರಾಮುಲು ಉಪಸ್ಥಿತರಿದ್ದರು.

ಪ್ರಮುಖ ಅಂಶಗಳು:
* ಹೊಸ ಮಾದರಿಯ 75 ಎಲೆಕ್ಟ್ರಿಕ್ ಬಸ್ಸುಗಳನ್ನು ರಸ್ತೆಗಿಳಿಸಿದ ಬಿಎಂಟಿಸಿ
* ಸ್ವಿಚ್ ಮೊಬಿಲಿಟಿ ಲಿಮಿಟೆಡ್ ನಿಂದ 12 ಮೀಟರ್ ಉದ್ದದ ನಾನ್ ಎಸಿ ಇ-ಬಸ್‌ಗಳು
* 40+1 ಆಸನಗಳ ಬಸ್‌ಗಳು
* ಮೆಜೆಸ್ಟಿಕ್ – ವಿದ್ಯಾರಣ್ಯಪುರ, ಶಿವಾಜಿನಗರ – ಯಲಹಂಕ, ಯಲಹಂಕ – ಕೆಂಗೇರಿ, ಮೆಜೆಸ್ಟಿಕ್ – ಯಲಹಂಕ ಉಪನಗರ, ಹೆಬ್ಬಾಳ – ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗಗಳಲ್ಲಿ ಸಂಚರಿಸಲಿರುವ ಎಲೆಕ್ಟ್ರಿಕ್ ಬಸ್‌ಗಳು

No Comments

Leave A Comment