Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ರಾವತ್ ಬಂಧನ: ಸಂಸತ್ತಿನಲ್ಲಿ ವಿಪಕ್ಷಗಳಿಂದ ಭಾರಿ ಗದ್ದಲ, ಸಂಸದರ ಅಮಾನತು ವಾಪಸ್ ಗೆ ಬಿಗಿಪಟ್ಟು, ಕಲಾಪ ಮುಂದೂಡಿಕೆ

ನವದೆಹಲಿ: ಶಿವಸೇನೆ ನಾಯಕ ಸಂಜಯ್‌ ರಾವತ್‌ ಅವರ ಬಂಧನ ಮತ್ತು ಕಾಂಗ್ರೆಸ್ ಸಂಸದರ ಅಮಾನತು ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಪ್ರತಿಭಟನೆ ತೀವ್ರಗೊಳಿಸಿದ್ದು, ಸಂಸದರ ಅಮಾನತು ವಾಪಸ್ ಗೆ ಬಿಗಿಪಟ್ಟು ಹಿಡಿದ ಪರಿಣಾಮ ಕಲಾಪವನ್ನು ಮುಂದೂಡಲಾಗಿದೆ.

11 ಗಂಟೆಗೆ ಸದನ ಸಭೆ ಸೇರುತ್ತಿದ್ದಂತೆ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ದೇಶಕ್ಕೆ ಪ್ರಶಸ್ತಿಗಳನ್ನು ತಂದ ಭಾರತೀಯ ಕ್ರೀಡಾ ಪಟುಗಳನ್ನು ಅಭಿನಂದಿಸಿದರು. ಮೀರಾಬಾಯಿ ಚಾನು, ಜೆರೆಮಿ ಲಾಲ್ರಿನ್ನುಂಗಾ ಮತ್ತು ಅಚಿಂತಾ ಶೆಯುಲಿ ಚಿನ್ನ ಗೆದ್ದರೆ, ಬಿಂದ್ಯಾರಾಣಿ ದೇವಿ ಮತ್ತು ಸಂಕೇತ್ ಸರ್ಗರ್ ಬೆಳ್ಳಿ ಮತ್ತು ಗುರುರಾಜ ಪೂಜಾರಿ ಕಂಚು ಪಡೆದರು. ಬಿರ್ಲಾ ಅವರು ಪದಕ ವಿಜೇತರು ಮತ್ತು ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಆಟಗಾರರನ್ನು ಅಭಿನಂದಿಸಿದರು ಮತ್ತು ಅವರು ದೇಶದ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.

ಅವರು ವಿವಿಧ ಸಚಿವಾಲಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೈಗೆತ್ತಿಕೊಂಡಾಗ, ಕಾಂಗ್ರೆಸ್ ಸದಸ್ಯರು ತಮ್ಮ ನಾಲ್ವರು ಸಹೋದ್ಯೋಗಿಗಳ ಅಮಾನತು ಹಿಂಪಡೆಯಲು ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದರು. ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಪ್ರತಿಪಕ್ಷಗಳು ತಮ್ಮ ಪ್ರತಿಭಟನೆಯಿಂದ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಮತ್ತು ಸದನವನ್ನು ನಡೆಸಲು ಬಿಡುತ್ತಿಲ್ಲ ಎಂದು ಆರೋಪಿಸಿದರು.

ಈ ವೇಳೆ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಸಭಾಪತಿ ಓಂ ಬಿರ್ಲಾ ಅವರು, ಸದನದ ಘನತೆಯನ್ನು ಕುಗ್ಗಿಸುವ ಇಂತಹ ಪ್ರತಿಭಟನೆಗಳು ಒಳ್ಳೆಯದಲ್ಲ ಎಂದು ಹೇಳಿ ಪ್ರತಿಪಕ್ಷಗಳು ಮನವಿಗೆ ಕಿವಿಗೊಡದ ಹಿನ್ನೆಲೆಯಲ್ಲಿ ಸ್ಪೀಕರ್ ಸದನವನ್ನು ಮುಂದೂಡಿದರು.

ಸದನದೊಳಗೆ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಕ್ಕಾಗಿ ನಾಲ್ವರು ಕಾಂಗ್ರೆಸ್ ಸಂಸದರಾದ ಮಾಣಿಕಂ ಠಾಗೋರ್, ರಮ್ಯಾ ಹರಿದಾಸ್, ಟಿಎನ್ ಪ್ರತಾಪನ್ ಮತ್ತು ಎಸ್ ಜೋತಿಮಣಿ ಅವರನ್ನು ಕಳೆದ ಸೋಮವಾರ ಅಧಿವೇಶನದ ಉಳಿದ ಭಾಗದಿಂದ ಅಮಾನತುಗೊಳಿಸಲಾಗಿತ್ತು.

ರಾಜ್ಯಸಭೆಯಲ್ಲೂ ಗದ್ದಲ
ಪತ್ರಾಚಾಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ  ಶಿವಸೇನೆ ವಕ್ತಾರ ಸಂಜಯ್ ರಾವತ್ ಅವರನ್ನು ಬಂಧಿಸಲಾಗಿದ್ದು, ಇದೇ ಕಾರಣಕ್ಕೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮತ್ತು ಶಿವಸೇನೆ ಸಂಸದರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ಸಂಸದರು ಅಮಾನತ್ತುಗೊಂಡ ಸದಸ್ಯರ ಅಮಾನತು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ರಾವತ್ ಬಂಧನ ವಿಚಾರವಾಗಿ ಮಾತನಾಡಿದ ಸಭಾಪತಿ ಎಂ ವೆಂಕಯ್ಯ ನಾಯ್ಡು ಅವರು ಈ ವಿಷಯಕ್ಕೂ ಸದನಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ತಮ್ಮ ಸ್ಥಾನಗಳಿಗೆ ಹಿಂತಿರುಗುವಂತೆ ಸದಸ್ಯರಿಗೆ ಮನವಿ ಮಾಡಿದರು. ಇದೇ ವೇಳೆ ಪ್ರತಿಪಕ್ಷದ ಇತರ ಸಂಸದರೂ ಬೆಲೆ ಏರಿಕೆಯಂತಹ ಸಮಸ್ಯೆಗಳನ್ನು ಪ್ರಸ್ತಾಪಿಸಿ ಮತ್ತೆ ಗದ್ದಲ ಮುಂದುವರೆಸಿದರು. ನಂತರ ಶಿವಸೇನೆ ಹಾಗೂ ಟಿಎಂಸಿ ಸಂಸದರು ಸದನದ ಬಾವಿಗೆ ಇಳಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ವೇಳೆ ಸಭಾಪತಿ ನಾಯ್ಡು ಅವರು, ‘ನಿಮ್ಮ ಸ್ಥಾನಗಳಿಗೆ ಹಿಂತಿರುಗಿ. ಹೊರಗಿನ ವಿಚಾರಗಳನ್ನು ಇತ್ಯರ್ಥಗೊಳಿಸಲು ನೀವು ಸದನವನ್ನು ಬಳಸಲಾಗುವುದಿಲ್ಲ” ಎಂದು ಕಲಾಪವನ್ನು ಮುಂದೂಡಿದರು.  ಜಾರಿ ನಿರ್ದೇಶನಾಲಯ (ಇಡಿ) ರಾವತ್ ಅವರ ನಿವಾಸದಲ್ಲಿ ಒಂಬತ್ತು ಗಂಟೆಗಳ ಕಾಲ ಶೋಧ ನಡೆಸಿದ ನಂತರ ಮುಂಬೈನ ‘ಚಾಲ್’ ಮರು ಅಭಿವೃದ್ಧಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಬಂಧಿಸಿದೆ.

ಜುಲೈ 18 ರಂದು ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದಲೂ ಕೆಲವು ಆಹಾರ ಪದಾರ್ಥಗಳ ಬೆಲೆ ಏರಿಕೆ ಮತ್ತು ಜಿಎಸ್‌ಟಿ ದರ ಏರಿಕೆ ಕುರಿತು ಚರ್ಚೆಗೆ ಕೋರಿ ಪ್ರತಿಪಕ್ಷಗಳ ಪ್ರತಿಭಟನೆಯಿಂದಾಗಿ ಲೋಕಸಭೆಯ ಕಲಾಪಗಳು ಹೆಚ್ಚಾಗಿ ಅಸ್ತವ್ಯಸ್ತಗೊಂಡಿವೆ.

No Comments

Leave A Comment