‘ನನ್ನೊಂದಿಗೆ ಮಾತನಾಡಬೇಡಿ’-ಸ್ಮೃತಿ ಇರಾನಿಗೆ ಸೋನಿಯಾ ಗಾಂಧಿ ಸೂಚನೆ
ನವದೆಹಲಿ:ಜು 28. ’ನನ್ನೊಂದಿಗೆ ಮಾತನಾಡಬೇಡಿ’ ಎಂದು ಬಿಜೆಪಿಯ ಸ್ಮೃತಿ ಇರಾನಿಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸೂಚಿಸಿದ ಪ್ರಸಂಗ ಇಂದು ಸಂಸತ್ತಿನಲ್ಲಿ ನಡೆದಿದೆ.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ‘ರಾಷ್ಟ್ರಪತ್ನಿ’ ಎಂದು ಕರೆದಿದ್ದಕ್ಕಾಗಿ ಸಂಸತ್ತಿನಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಯಿತು. ಚೌಧರಿ ವಿರುದ್ದ ಬಿಜೆಪಿ ಸಂಸದರು ಪ್ರತಿಭಟನೆ ನಡೆಸಿದ್ದರಿಂದ ಲೋಕಸಭೆಯನ್ನು ಮುಂದೂಡಲಾಗಿತ್ತು. ಆದರೆ ಈ ವಿರಾಮದ ಸಂದರ್ಭದಲ್ಲಿ ಆಡಳಿತ ಮತ್ತು ವಿಪಕ್ಷ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕುಮಕಿ ನಡೆಯಿತು. ಬಿಜೆಪಿ ಸಂಸದರು ಫಲಕ ಪ್ರದರ್ಶಿಸಿ ಪ್ರತಿಭಟಿಸಿದರು. ಸ್ಮೃತಿ ಇರಾನಿ ಮಾತನಾಡಿ, ಸೋನಿಯಾ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಘೋಷಣೆ ಕೂಗುತ್ತಿದ್ದ ಬಿಜೆಪಿ ಸಂಸದರ ಬಳಿ ಸೋನಿಯಾ ಗಾಂಧಿ ಆಗಮಿಸಿದರು. ಸಂಸದೆ ರಮಾದೇವಿ ಅವರ ಬಳಿ ಬಂದು ಈಗಾಗಲೇ ರಂಜನ್ ಚೌಧರಿ ಕ್ಷಮೆ ಯಾಚನೆ ಮಾಡಿದ್ದಾರೆ. ಆದರೆ ನನ್ನನ್ನು ಯಾಕೆ ಸುಖಾ ಸುಮ್ಮನೆ ಎಳೆದು ತರುತ್ತಿದ್ದೀರಿ ಎಂದು ಪ್ರಶ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಮೃತಿ ಇರಾನಿ, ಮೇಡಂ ನಾನು ನಿಮ್ಮ ಹೆಸರು ಪ್ರಸ್ತಾಪಿಸಿದ್ದೇನೆ, ಈ ಬಗ್ಗೆ ನಾನೇ ಹೇಳಬಹುದೇ ಎಂದು ಕೇಳಿದರು. ಆದರೆ ಇದಕ್ಕೆ ತಿರುಗೇಟು ನೀಡಿದ ಸೋನಿಯಾ, ’ನನ್ನೊಂದಿಗೆ ಮಾತನಾಡಬೇಡಿ’ ಎಂದಿದ್ದಾರೆ.
ಬಳಿಕ ಎರಡೂ ಪಕ್ಷಗಳ ಸಂಸದರು ಪ್ರತಿಭಟನೆ-ಪ್ರತಿರೋಧ ನಡೆಸಿದರು. ಬಳಿಕ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರು ಎಂದು ತಿಳಿದು ಬಂದಿದೆ.