ಭರ್ಜರಿ ಬೇಟೆ: ನೀರಿನ ಸಂಪ್ ನಲ್ಲಿ ಬಚ್ಚಿಟ್ಟಿದ್ದ 2.68 ಕೋಟಿ ರೂ. ಮೌಲ್ಯದ 1693 ಕೆ.ಜಿ ರಕ್ತ ಚಂದನ ವಶಕ್ಕೆ, ಓರ್ವ ಆರೋಪಿ ಬಂಧನ
ಬೆಂಗಳೂರು: ಫಾರ್ಮ್ ಹೌಸ್ ನ ನೀರಿನ ಸಂಪ್ ನಲ್ಲಿ ಶೇಖರಿಸಿಡಲಾಗಿದ್ದ ಸುಮಾರು 2.68 ಕೋಟಿ ರೂ ಮೌಲ್ಯದ ಸಾವಿರಾರು ಕೆಜಿ ರಕ್ತಚಂದನ ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಹೆಸರಘಟ್ಟದಲ್ಲಿ ಖಚಿತ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ ಪಶ್ಚಿಮ ವಿಭಾಗದ ಪೊಲೀಸರು ಫಾರ್ಮ್ ಹೌಸ್ ನ ನೀರಿನ ಸಂಪ್ ನಲ್ಲಿ ಶೇಖರಿಸಿಡಲಾಗಿದ್ದ ಸುಮಾರು 2.68 ಕೋಟಿ ರೂ ಮೌಲ್ಯದ 1693 ಕೆ.ಜಿ ರಕ್ತ ಚಂದನವನ್ನು ವಶ ಪಡಿಸಿಕೊಂಡಿದ್ದಾರೆ. ಅಂತೆಯೇ ಈ ವೇಳೆ ತಮಿಳುನಾಡು ಮೂಲದ ವಿನೋದ್ ಎಂಬ ಆರೋಪಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಅರೋಪಿಯನ್ನು ಬ್ಯಾಟರಾಯನಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಬಂಧಿತ ಆರೋಪಿ ವಿನೋದ್ ಹೆಸರಘಟ್ಟದ ಫಾರ್ಮ್ ಹೌಸ್ ನಲ್ಲಿ ಕಳೆದ 15 ದಿನಗಳಿಂದ ಕೆಲಸ ಮಾಡುತ್ತಿದ್ದ. ಜುಲೈ 22 ರಂದು ವಿನೋದ್ ಹಾಗೂ ಅಜಯ್ ಎಂಬುವರು ಸ್ಯಾಟ್ಲೈಟ್ ಬಸ್ ನಿಲ್ದಾಣದ ನ್ಯೂ ಟಿಂಬರ್ ಲೇಔಟ್ ನಲ್ಲಿ 113 ಕೆಜಿ ಮೌಲ್ಯದ ರಕ್ತ ಚಂದನವನ್ನು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಇನ್ಸ್ ಸ್ಪೆಕ್ಟರ್ ಶಂಕರ್ ನಾಯಕ್ ನೇತೃತ್ವದ ತಂಡ ಇಬ್ಬರು ಆರೋಪಿಗಳ ಪೈಕಿ ವಿನೋದ್ ನನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಹೆಸರಘಟ್ಟದ ಫಾರ್ಮ್ ಹೌಸ್ ನಲ್ಲಿ ನೀರಿಲ್ಲದ ಸಂಪ್ ನಲ್ಲಿ ಬಚ್ಚಿಟ್ಟಿದ್ದ ಒಟ್ಟು 2.68 ಕೋಟಿ ಮೌಲ್ಯದ 1693 ರಕ್ತಚಂದನ ಜಪ್ತಿ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಈ ವಿಷಯ ತಿಳಿಸಿದ್ದಾರೆ. ಪ್ರಕರಣದಲ್ಲಿ ಸದ್ಯ ಓರ್ವನನ್ನ ಮಾತ್ರ ಬಂಧಿಸಲಾಗಿದೆ. ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪರಾರಿಯಾಗಿರುವ ಆರೋಪಿಗಳ ಅಣತಿಯಂತೆ ವಿನೋದ್ ರಕ್ತ ಚಂದನ ತುಂಡುಗಳ ಮಾರಾಟಕ್ಕೆ ಮುಂದಾಗಿದ್ದ. ಎಷ್ಟು ತಿಂಗಳಿಂದ ಈ ವ್ಯವಹಾರ ನಡೆಸುತ್ತಿದ್ದರು ಎನ್ನುವುದು ಪರಾರಿಯಾಗಿರುವ ಆರೋಪಿಗಳನ್ನ ಬಂಧಿಸಿದ ನಂತರ ಸ್ಪಷ್ಟವಾಗಲಿದೆ. ಅಲ್ಲದೆ ಫಾರ್ಮ್ ಹೌಸ್ ನ ಮಾಲೀಕರು ಯಾರೂ ಎನ್ನುವುದು ಕೂಡಾ ಇಲ್ಲಿವರೆಗೆ ತಿಳಿದು ಬಂದಿಲ್ಲ. ಫಾರ್ಮ್ ಹೌಸ್ ಮಾಲೀಕನ ಮಾಹಿತಿಗಾಗಿ ಗ್ರಾಮ ಲೆಕ್ಕಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೆಲಮಂಗಲದ ಬಳಿ ನಾಲ್ವರ ಬಂಧನ
ಅಂತೆಯೇ ನೆಲಮಂಗಲದ ಬಳಿಯೂ ಕಾರ್ಯಾಚರಣೆ ನಡೆಸಿರುವ ಪೊಲೀಸರು ಇನ್ನೂ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ಬಳಿಯೂ ಕೆಲವು ರಕ್ತಚಂದನ ತುಂಡುಗಳು ಸಿಕ್ಕಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಾಮಾಕ್ಷಿಪಾಳ್ಯ ನಿವಾಸಿ ಆರ್.ವಿನೋದ್ ನನ್ನು ಬಂಧಿಸಲಾಗಿದ್ದು, ಈತನ ಸಹಚರ ಟಿ ದಾಸರಹಳ್ಳಿ ನಿವಾಸಿ ಅಜಯ್ ಪರಾರಿಯಾಗಿದ್ದಾನೆ. ವಿನೋದ್ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಭಾನುವಾರ ಮಧ್ಯಾಹ್ನ ನೆಲಮಂಗಲದ ಲಕ್ಷ್ಮಯ್ಯ, ಸಂಜಯ್, ರಾಜು ಮತ್ತು ಕೃಷ್ಣ ಎಂಬುವವರನ್ನು ಬಂಧಿಸಿದ್ದಾರೆ.
ವಿನೋದ್ ಮತ್ತು ಅಜಯ್ ಸುಮಾರು 17 ಕೆಜಿಯಷ್ಟು ರಕ್ತ ಚಂದನ ಮಾದರಿಯೊಂದಿಗೆ ಬೈಕ್‌ನಲ್ಲಿ ಬಂದಿದ್ದರು. ಈ ವೇಳೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಆರೋಪಿಗಳಿಂದ ಎರಡು ಬೈಕ್‌ಗಳನ್ನೂ ವಶಪಡಿಸಿಕೊಂಡಿದ್ದಾರೆ. ನೆರೆಯ ಆಂಧ್ರಪ್ರದೇಶದಿಂದ ರಕ್ತಚಂದನ ಅಕ್ರಮವಾಗಿ ಸಾಗಣೆಯಾಗಿರಬಹುದು ಎಂದು ಶಂಕಿಸಿರುವ ಪೊಲೀಸರು, ಕಿಂಗ್‌ಪಿನ್ ಮತ್ತು ಕಳ್ಳಸಾಗಾಣಿಕೆಯ ಸಂಭವನೀಯ ಮಾರ್ಗವನ್ನು ಕಂಡುಹಿಡಿಯಲು ಅವರ ಸಮನ್ವಯವನ್ನು ಕೋರಿ ಅಲ್ಲಿನ ಪೊಲೀಸರಿಗೂ ಪತ್ರ ಬರೆದಿದ್ದಾರೆ.