ಬೆಂಗಳೂರಿನಲ್ಲಿ ಮತ್ತೋರ್ವ ಶಂಕಿತ ಎಲ್ ಇಟಿ ಉಗ್ರನ ಬಂಧನ, ನಾಲ್ವರು ವಶಕ್ಕೆ
ಬೆಂಗಳೂರು: ರಾಜ್ಯದ ಪೊಲೀಸರು ಬೆಂಗಳೂರಿನಲ್ಲಿ ತಡರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಶಂಕಿತ ಲಷ್ಕರ್ ಇ- ತೊಯ್ಬಾ ಸಂಘಟನೆಯ ಓರ್ವ ಉಗ್ರ ಹಾಗೂ ಮತ್ತಿತರ ನಾಲ್ವರನ್ನು ಬಂಧಿಸಲಾಗಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ.
ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಮತ್ತು ಗುಪ್ತಚರ ವಿಭಾಗದ ಸಮನ್ವಯದಲ್ಲಿ ಸಿಸಿಬಿ ವಿಶೇಷ ವಿಭಾಗ ದೊರೆತ ಖಚಿತ ಮಾಹಿತಿ ಆಧಾರದ ಮೇಲೆ ಅಸ್ಸಾಂನಿಂದ ಬಂದಿದ್ದ ಅಖ್ತರ್ ಹುಸೇನ್ ಲಷ್ಕರ್ ಎಂಬ ಶಂಕಿತ ಉಗ್ರನ ನಿವಾಸದ ಮೇಲೆ ದಾಳಿ ನಡೆಸಿದೆ. 30ಕ್ಕೂ ಹೆಚ್ಚು ಸಿಬ್ಬಂದಿಯನ್ನೊಳಗೊಂಡ ತಂಡದಿಂದ ಈ ಕಾರ್ಯಾಚರಣೆ ನಡೆದಿದೆ.
ಶಂಕಿತ ಭಯೋತ್ಪಾದಕ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ತಿಲಕನಗರ ಸಮೀಪ ಇತರರೊಂದಿಗೆ ವಾಸವಾಗಿದ್ದ ಎನ್ನಲಾಗಿದೆ. ಈ ಕೇಸ್ ಸಂಬಂಧ ಬೆಂಗಳೂರು ಪೊಲೀಸರು ಇನ್ನೂ ಅಧಿಕೃತ ಹೇಳಿಕೆ ನೀಡಬೇಕಾಗಿದೆ. ತಿಲಕನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಐವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜೂನ್‌ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ತಾಲಿಬ್ ಹುಸೇನ್‌ನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಬೆಂಗಳೂರು ಭಯೋತ್ಪಾದಕರು ಮತ್ತು ದೇಶ ವಿರೋಧಿ ಶಕ್ತಿಗಳ ಸುರಕ್ಷಿತ ನೆಲೆಯಾಗುತ್ತಿದೆ ಎಂಬ ಚರ್ಚೆ ಹುಸೇನ್ ಬಂಧನದಿಂದ ಮುನ್ನೆಲೆಗೆ ಬಂದಿದೆ.