ಭಗವದ್ಗೀತೆ ಯಾವುದೇ ಮತೀಯ ಗ್ರಂಥವಲ್ಲ,ಸನ್ಮತಿ ನೀಡುವ ಗ್ರಂಥ -“ಕೋಟಿ ಗೀತಾ ಲೇಖನ ಯಜ್ಞದೀಕ್ಷೆಯ ” ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿ ಪುತ್ತಿಗೆ ಶ್ರೀಗಳು
ಉಡುಪಿ :ಜು.25. ಭಗವಂತ ಶ್ರೀಕೃಷ್ಣ ವ್ಯಕ್ತಿಯ ಪರ ಅಲ್ಲ. ತತ್ವದ ಪರ ಮತ್ತು ಸಜ್ಜನರ ಪಕ್ಷಪಾತಿ. ಹೀಗಾಗಿ ಭಗವದ್ಗೀತೆ ಯಾವುದೇ ಮತೀಯ ಗ್ರಂಥವಲ್ಲ. ಸನ್ಮತಿ ನೀಡುವ ಗ್ರಂಥ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಸೋಮವಾರ ಉಡುಪಿಯ ರಥಬೀದಿಯ ಶ್ರೀಪುತ್ತಿಗೆ ಮಠದಲ್ಲಿ “ಕೋಟಿಗೀತಾ ಲೇಖನ ಯಜ್ಞದೀಕ್ಷೆಯ ” ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಭಗವದ್ಗೀತೆಯ ಪರಿಜ್ಞಾನ ಹೊಂದುವುದು ಅಗತ್ಯ. ಜಗತ್ತಿನ ಎಲ್ಲಾ ಸಮಸ್ಯೆಗಳ ಮೂಲ ಅಹಂಕಾರ ಮತ್ತು ಮಮಕಾರ. ಎಲ್ಲವೂ ಭಗವಂತನ ಅಧೀನ ಎಂದು ತಿಳಿದರೆ ಮನುಷ್ಯನಿಗೆ ಅಹಂಕಾರ ಬರಲು ಸಾಧ್ಯವಿಲ್ಲ. ಹೀಗಾಗಿ ಬಾಹ್ಯ ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ಗೀತೆಯಲ್ಲಿ ಪರಿಹಾರವಿದೆ ಎಂದು ಹೇಳಿದರು.
2024ರ ಪರ್ಯಾಯದಲ್ಲಿನ ಯೋಜನೆ:- ಮುಂದಿನ ಪುತ್ತಿಗೆ ಮಠದ ಪರ್ಯಾಯದಲ್ಲಿ ಪ್ರಧಾನ ಯೋಜನೆಗಳನ್ನು ಪುತ್ತಿಗೆ ಶ್ರೀಗಳು ಪ್ರಕಟಿಸಿದರು. 1. ಕೋಟಿ ಜನರಿಂದ ಭಗವದ್ಗೀತೆ ಬರೆಸುವುದು 2. ಅಂತರಾಷ್ಟ್ರೀಯ ಭಗವದ್ಗೀತೆ ಸಮ್ಮೇಳನ 3. ಭಗವದ್ಗೀತೆ ಯಾಗ 4. ಅಖಂಡ ಗೀತಾ ಪಾರಾಯಣ 5. ಕಲ್ಸಂಕದಲ್ಲಿ ಕೃಷ್ಣ ಮಠಕ್ಕೆ ಬರುವಲ್ಲಿ ಭವ್ಯ ಸ್ವಾಗತ ಗೋಪುರ ಹಾಗೂ ಮಧ್ವಾಚಾರ್ಯರ ಪ್ರತಿಮೆ ಸ್ಥಾಪನೆ 6 ಪರ್ಯಾಯದ ಸ೦ದರ್ಭದಲ್ಲಿ ಶ್ರೀಕೃಷ್ಣದೇವರಿಗೆ ಗೀತೋಪದೇಶ ಸುವರ್ಣರಥ ಸಮರ್ಪಣೆ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ತಿಳಿಸಿದ್ದಾರೆ.
ಸಮಾರ೦ಭದಲ್ಲಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ,ರಾಜಕೀಯ ಮುಖಂಡರಾದ ಪ್ರಮೋದ್ ಮಧ್ವರಾಜ್, ಯಶ್ಪಾಲ್ ಸುವರ್ಣ, ಬೆಳಪು ದೇವಿಪ್ರಸಾದ್ ಶೆಟ್ಟಿ, ಯೋಗೀಶ್ ಶೆಟ್ಟಿ, ಪ್ರವೀಣ್ ಶೆಟ್ಟಿ ಕಪ್ಪೆಟ್ಟು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಶ್ರೀಮಠದ ಡಾ.ಸುಗುಣದಾಸ, ನಾಗರಾಜ್ ಆಚಾರ್ಯ,ರತೀಶ್ ತ೦ತ್ರಿ,ವಿಷ್ಣುಮೂರ್ತಿ ಉಪಾಧ್ಯಾಯ, ತೆ೦ಕರಗುತ್ತು ಸ೦ತೋಷ್ ಶೆಟ್ಟಿ ರವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಡಾ.ಬಿ.ಗೋಪಾಲಾಚಾರ್ ರವರು ಸ್ವಾಗತಿಸಿ,ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದವನ್ನಿತ್ತರು.
5 ತ೦ಡಗಳ ಪ್ರಮುಖರಾದ ಡಾ.ಬಿ.ಗೋಪಾಲಾಚಾರ್,ರಮಣ ಆಚಾರ್ಯ,ಚಂದನ್ ಕಾರಂತ್, ಮಹಿತೋಷ ಆಚಾರ್ಯ, ಕೆ. ರಮೇಶ್ ಭಟ್ ರವರು ಉಪಸ್ಥಿತರಿದ್ದರು.
–ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆಯನ್ನು ಪಡೆದುಕೊಳ್ಳಿ– 1 ಭಾವಿ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಚತುರ್ಥಪರ್ಯಾಯ ಕಾಲದಲ್ಲಿ ಒಂದು ಕೋಟಿ ಕೃಷ್ಣ ಭಕ್ತರಿಂದ ಭಗವದ್ಗೀತೆಯನ್ನು ಬರೆಸಿ ಉಡುಪಿ ಕೃಷ್ಣನಿಗೆ ಅರ್ಪಿಸುವ ಸಂಕಲ್ಪ ಮಾಡಿದ್ದಾರೆ. 2. ಸಮಗ ಭಗವದ್ಗೀತೆ 18 ಅಧ್ಯಾಯಗಳು 701 ಶ್ಲೋಕಗಳನ್ನು ಬರೆಯುವುದು. 3, ಗೀತೆ ಬರೆಯುವ ಹೊತ್ತಗೆಯನ್ನು ಶ್ರೀಮಠದಿಂದಲೇ ನೀಡಲಾಗುವುದು. 4. ಸಂಕಲ್ಪ ಸೂತ್ರವನ್ನು ಕೊಡಲಾಗುತ್ತದೆ. ಧರಿಸಿಕೊಂಡು ಬರೆಯುವುದು. 5 ಪುತ್ತಿಗೆ ಪರ್ಯಾಯ ಕಾಲದ 2 ವರ್ಷಗಳ ಸಮಯದಲ್ಲಿ ಕೃಷ್ಣನಿಗೆ ಸಮರ್ಪಿಸುವುದು. 6. ಶ್ರೀಪಾದರು ಗೀತೆ ಬರೆದ ಹೊತ್ತಗೆಯನ್ನು ಕೃಷ್ಣನಿಗೆ ಅರ್ಪಿಸಿ ಶ್ರೀಮುದ್ರೆ ಹಾಗೂ ಹಸ್ತಾಕ್ಷರವನ್ನು ಬರೆದು ಕೃಷ್ಣ ಪ್ರಸಾದ ರೂಪದಲ್ಲಿ ನೀಡುವರು. 7. ಒಟ್ಟು ಕಾಣಿಕೆ 258 ರೂಪಾಯಿಗಳು (ಸಂಕಲ್ಪ ಕಾಣಿಕೆ 100+ ಬರೆಯುವ ಪುಸ್ತಕ 150 ರೂ. + ಸಂಕಲ್ಪ ಸೂತ್ರ 8ರೂ). ಬನ್ನಿ ಕೃಷ್ಣ ಗೀತೆ ಬರೆದು ಕಷ್ಟ ಕಳೆದುಕೊಳ್ಳಿ. ಕೃಷ್ಣನಿಗೆ ಇಷ್ಟರಾಗಿ.