
ಆಂಧ್ರ ಪ್ರದೇಶ: ಡ್ರಗ್ಸ್ ದಂಧೆಕೋರನನ್ನು ಹಿಡಿಯಲು ತೆರಳುತ್ತಿದ್ದಾಗ ಪೊಲೀಸರ ಕಾರು ಢಿಕ್ಕಿ : 3ಪೊಲೀಸ್ ಸಿಬ್ಬಂದಿಗಳು ಮೃತ್ಯು
ಚಿತ್ತೂರು: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಇಂದು ನಸುಕಿನ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಶಿವಾಜಿನಗರ ಪೊಲೀಸ್ ಠಾಣೆಯ ಮೂವರು ಪೊಲೀಸರು ಸಾವನ್ನಪ್ಪಿದ್ದಾರೆ.
ಕರ್ತವ್ಯದ ಮೇರೆಗೆ ತಿರುಪತಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಪುತಲಪಟ್ಟು ಮಂಡಲದ ಪಿ. ಕೊಟ್ಟಕೋಟದಲ್ಲಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಥಳಕ್ಕೆ ಚಿತ್ತೂರು ಡಿವೈಎಸ್ ಪಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಸಿಬ್ಬಂದಿ ಸಾವಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಕಂಬನಿ ಮಿಡಿದಿದ್ದಾರೆ.
ಪಿಎಸ್ ಐ ಅವಿನಾಶ್ (29) ಕಾನ್ಸ್ ಟೇಬಲ್ ಅನಿಲ್ ಮುಳಿಕ್ (26) ಕ್ಯಾಬ್ ಚಾಲಕ ಜೋಸೆಫ್ (28) ಮೃತಪಟ್ಟವರು. ಕಾನ್ಸ್ ಟೇಬಲ್ ಗಳಾದ ದೀಕ್ಷಿತ್, ಶರಣ ಬಸವ ಗಂಭೀರವಾಗಿ ಗಾಯಗೊಂಡಿದ್ದು, ಚಿತ್ತೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಎಸ್ ಐ ಅವಿನಾಶ್ ಬೀದರ್ ಜಿಲ್ಲೆ ಬಸವ ಕಲ್ಯಾಣದ ರೋಲವಾಡಿ ಗ್ರಾಮದವರು. ಈ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಗಾಂಜಾ ಕೇಸ್ ಸಂಬಂಧ ಆರೋಪಿಯನ್ನು ಬಂಧಿಸಲು ತಿರುಪತಿಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಪಿಎಸ್ ಐ ಸೇರಿದಂತೆ ಮೂವರ ದುರ್ಮರಣಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬದ ಜೊತೆಗೆ ಇಲಾಖೆ ಇರಲಿದೆ ಟ್ವೀಟ್ ಮೂಲಕ ಪ್ರವೀಣ್ ಸೂದ್ ಸಂತಾಪ ಸೂಚಿಸಿದ್ದಾರೆ.