ನಾಗ್ಪುರ: ಕುಟುಂಬ ಸಮೇತ ಕಾರಿಗೆ ಬೆಂಕಿ ಹಚ್ಚಿ ಉದ್ಯಮಿ ತಾನೂ ಸಾವು
ನಾಗ್ಪುರ: ಆರ್ಥಿಕ ಸಂಕಷ್ಟದಿಂದಾಗಿ ಕಂಗೆಟ್ಟಿದ್ದ ಉದ್ಯಮಿಯೊಬ್ಬರು ಕಾರಿನಲ್ಲಿದ್ದ ತಮ್ಮ ಇಡೀ ಕುಟುಂಬಕ್ಕೆ ಬೆಂಕಿ ಹಾಕಿ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಹಣಕಾಸಿನ ತೊಂದರೆಯಿಂದ ನಾಗ್ಪುರದಲ್ಲಿ ಉದ್ಯಮಿಯೊಬ್ಬರು ಮಂಗಳವಾರ ಮಧ್ಯಾಹ್ನ ತನ್ನ ಕಾರಿನಲ್ಲಿ ಪತ್ನಿ ಮತ್ತು ಮಗನನ್ನು ಕೂರಿಸಿ ಕಾರಿಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಈ ಘೋರ ಘಟನೆಯಲ್ಲಿ ಸ್ಥಳೀಯರು ಉದ್ಯಮಿ ಪತ್ನಿ ಮತ್ತು ಮಗನನ್ನು ಹೊರಗೆ ಎಳೆಯುವಲ್ಲಿ ಯಶಸ್ವಿಯಾಗಿದ್ದು, ಉದ್ಯಮಿ ಬೆಂಕಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕಾರಿಗೆ ಬೆಂಕಿ ಹಚ್ಚಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸುಟ್ಟು ಕರಕಲಾಗುತ್ತಿರುವ ಕಾರಿನಲ್ಲಿ ಚಾಲಕ ಸಿಲುಕಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಮೃತ ಉದ್ಯಮಿಯನ್ನು 58 ವರ್ಷದ ರಾಮರಾಜ್ ಭಟ್ ಎಂದು ಗುರುತಿಸಲಾಗಿದ್ದು ಅವರು ತಮ್ಮ ಕುಟುಂಬವನ್ನು ಹೋಟೆಲ್‌ಗೆ ಊಟಕ್ಕೆ ಕರೆದೊಯ್ದರು. ಬಳಿಕ ರಸ್ತೆಯೊಂದರಲ್ಲಿ ಇದ್ದಕ್ಕಿದ್ದಂತೆ ಕಾರನ್ನು ನಿಲ್ಲಿಸಿ ಕಾರಿಗೆ ಬೆಂಕಿಹಚ್ಚಿದ್ದಾರೆ ಎನ್ನಲಾಗಿದೆ.
ಆತ ತನ್ನ ಪತ್ನಿ ಹಾಗೂ ಮಗನ ಮೇಲೆ ಪೆಟ್ರೋಲ್ ಸುರಿದಿದ್ದು, ಅವರು ಪ್ರತಿಕ್ರಿಯಿಸುವ ಮೊದಲೇ ಅವರು ಕಾರಿನೊಳಗೆ ಕುಳಿತು ಬೆಂಕಿ ಹಚ್ಚಿದ್ದಾರೆ. ತೀವ್ರ ಸುಟ್ಟಗಾಯಗಳಿಂದ ಉದ್ಯಮಿ ರಾಮರಾಜ್ ಭಟ್ ಮೃತಪಟ್ಟಿದ್ದು, ಅವರ ಪತ್ನಿ ಸಂಗೀತಾ ಭಟ್, 57, ಮತ್ತು ಮಗ ನಂದನ್, 25, ಹೇಗೋ ಬಾಗಿಲು ತೆರೆದು ಕಾರಿನಿಂದ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅವರು ಸಹ ತೀವ್ರವಾಗಿ ಸುಟ್ಟುಹೋಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಸುಟ್ಟು ಕರಕಲಾದ ಕಾರಿನಲ್ಲಿ ಪ್ಲಾಸ್ಟಿಕ್ ಚೀಲದೊಳಗೆ ಒಂದು ಪತ್ರ ಪತ್ತೆಯಾಗಿದೆ ಎಂದು ಪೊಲೀಸರು ಹೇಳುತ್ತಾರೆ, ಅದರಲ್ಲಿ ಉದ್ಯಮಿ ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಎಂದು ಬರೆದಿದ್ದಾರೆ ಎನ್ನಲಾಗಿದೆ.