ಪವರ್ ಮಿನಿಷ್ಟರ್ ಊರಿನಲ್ಲಿಯೇ ಪವರ್ ಸಮಸ್ಯೆ.ಜು.19ರಂದು ಮೆಸ್ಕಾಂ ಮುತ್ತಿಗೆ-ಉಚಿತ ವಿದ್ಯುತ್ ನಮಗೆ ಬೇಡ ಜನರ ಅಕ್ರೋಶ
ಹೆಬ್ರಿ ಜು.15:ಪವರ್ ಮಿನಿಷ್ಟರ್ ಊರಿನಲ್ಲಿ ನಿರಂತರವಾಗಿ ಪವರ್ ಸಮಸ್ಯೆಕಾಣುತ್ತಿದ್ದು ಸಚಿವರು ಮೌನವಾಗಿದ್ದಾರೆ.ವಿದ್ಯುತ್ ಬೆಲೆ ಏರಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.ಅಪಾಯಕಾರಿ ಮರಗಳನ್ನು ತೆರವು ಮಾಡದೆ ಜನರ ಪ್ರಾಣದ ಜತೆ ಅರಣ್ಯ ಇಲಾಖೆ ಚಲ್ಲಾಟವಾಡುತ್ತಿದೆ.ಈ ನಿಟ್ಟಿನಲ್ಲಿ ಜು.19ರಂದು ಬೆಳಿಗ್ಗೆ 10 ಗಂಟೆ ಮೆಸ್ಕಾಂ ಹಾಗೂ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಜಾತ್ಯಾತೀತ ಜನತಾದಳ ಕಾರ್ಕಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಕುಚ್ಚೂರು ಶ್ರೀಕಾಂತ್ ಪೂಜಾರಿ ಹೇಳಿದರು.
ಅವರು ಜು.15ರಂದು ಹೆಬ್ರಿ ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ ಬೇಸಿಗೆಯಲ್ಲಿ ಟ್ರೀ ಟ್ರಿಮ್ಮಿಂಗ್,ಅಭಿವೃದ್ಧಿ ಎಂಬೆಲ್ಲಾ ಹೆಸರಿನಲ್ಲಿ ನಿರಂತರ ವಿದ್ಯುತ್ ಕಡಿತಗೊಳಿಸುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.ಮಳೆಗಾಲದಲ್ಲೂ ಕೂಡಾ ಅದೇ ಪುನರಾವರ್ತನೆಯಾಗುತ್ತಿದೆ.ಆದರೆ ಅಪಾಯಕಾರಿ ಮರಗಳು ತೀರಾ ಹಳೆಯ ಒಣಗಿದ ಮರಗಳು ಈಗ ಸಣ್ಣ ಮಳೆ ಗಾಳಿಗೆ ವಿದ್ಯುತ್ ವೈರ್‌ಗಳ ಮೇಲೆ ಬಿದ್ದು ವಿದ್ಯುತ್ ಕಡಿತವಾಗಿರುವುದು ಸಾಮಾನ್ಯವಾಗಿದೆ.ಈ ಸಮಸ್ಯೆಯ ಬಗ್ಗೆ ಮೆಸ್ಕಾಂ ಅಧಿಕಾರಿಗಳಲ್ಲಿ ಕೇಳಿದಾಗ ಮರ ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ಇರುವುದಿಲ್ಲ ಎಂದು ಹೇಳುತ್ತಾರೆ.ಈ ಬಗ್ಗೆ ಅರಣ್ಯ ಇಲಾಖೆಯಲ್ಲಿ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಕೂಡಾ ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ಜನರ ಜೀವಕ್ಕೆ ಜೀವನಕ್ಕೆ ಬೆಲೆ ಇಲ್ಲದಂತಾಗಿದೆ.ಅಲ್ಲದೇ ಈ ಅಪಾಯಕಾರಿ ಮರಗಳಿಂದ ಸಾಕಷ್ಟು ಬಾರಿ ಪ್ರಾಣ ಹಾನಿಯಾಗಿದ್ದು ಅದರ ಬಗ್ಗೆ ಯಾರೂ ಕೂಡಾ ಎಚ್ಚೆತ್ತುಕೊಂಡಿಲ್ಲ.
ಉಚಿತ ವಿದ್ಯುತ್ ಬೇಡ; ನಮಗೆ ಉಚಿತ ವಿದ್ಯುತ್ ಬೇಕಾಗಿರುವುದಿಲ್ಲ ತಿಂಗಳಿಗೆ ನಾವು ಕಟ್ಟುವ ಸಾವಿರಾರು ರೂ.ಗಳ ವಿದ್ಯುತ್ ಬಿಲ್‌ನಲ್ಲಿಯೇ ನಮಗೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಟ್ಟು ಜನಸಾಮಾನ್ಯರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಬೇಜವಬ್ದಾರಿ ಅಧಿಕಾರಿಗಳ ವಿರುದ್ಧ ಹಾಗೂ ಇಂಧನ ಸಚಿವರಲ್ಲೂ ಕೂಡಾ ಮನವಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ.
ಹೆಬ್ರಿಯಲ್ಲಿ ಕಾರ್ಕಳ ಉತ್ಸವ ಎಂದು ಕೋಟಿಗಟ್ಟಲೆ ಹಣವನ್ನು ನೀರಿನಂತೆ ರಸ್ತೆ ದುರಸ್ತಿಗೆ ಪೋಲು ಮಾಡಿ ಕೂಡಾ ಸಮರ್ಪಕ ವ್ಯವಸ್ಥೆಯಿಲ್ಲದೆ ಚರಂಡಿಯಲ್ಲಿ ನೀರು ಹರಿಯದೇ ರಸ್ತೆ ಮೇಲೆ ಹರಿಯುವುದರಿಂದ ರಸ್ತೆಗಳು ಸಂಪೂರ್ಣ ಹಾಳಾಗುತ್ತಿದೆ.ಇದರಿಂದ ರಸ್ತೆಯಲ್ಲಿ ಓಡಾಡುವ ಶಾಲಾ ಮಕ್ಕಳಿಗೆ,ಸಾರ್ವಜನಿಕರಿಗೆ ದಿನ ನಿತ್ಯ ಕೊಳಚೆ ನೀರಿನ ಅಭಿಷೇಕವಾಗುತ್ತಿದೆ.ಚರಂಡಿ ನೀರಿನ ನಿರ್ಮಾಣ ಕೂಡಾ ಈಗಾಗಲೇ ಹಣ ಮಾಡುವ ಉದ್ದೇಶಕ್ಕೆ ಮಾತ್ರ ನಿರ್ಮಾಣ ಮಾಡಿದ್ದು ಅದು ಕೇವಲ ಪರ್ಸೇಂಟೆಜ್‌ಗಾಗಿ ಮಾತ್ರ ಆಗಿದ್ದು ಮಳೆ ನೀರು ಹರಿಯುವ ಉದ್ದೇಶಕ್ಕಂತೂ ಮಾಡಿದ್ದಾಗಿರುವುದಿಲ್ಲ. ಏಕೆಂದರೆ ಮಳೆ ಬಂದಾಗ ನೀರು ಹರಿಯುವುದು ಕೇವಲ ರಸ್ತೆಯಲ್ಲಿ ಮಾತ್ರ.ಪ್ರತಿ ವರ್ಷಕೊಮ್ಮೆ ಜನರ ತೆರಿಗೆ ಹಣವನ್ನು ಸುಖಾಸುಮ್ಮನೆ ಪೋಲು ಮಾಡಿ ವ್ಯರ್ಥ ಮಾಡುತ್ತಿರುವ ಇಂತಹ ಪರ್ಸೇಂಟೆಜ್ ರಾಜಕೀಯಕ್ಕೆ ಏನೆಂದು ಹೇಳಬೇಕೋ ತಿಳಿಯುತ್ತಿಲ್ಲ.ಮುಂದಿನ ಚುನಾವಣೆಯಲ್ಲಿ ಜನ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ. ಜನಪರ ಆಡಳಿತಕ್ಕೆ ಜೆಡಿಎಸ್ ಒಂದೇ ಪರಿಹಾರ . ಉಡುಪಿ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿಯವರ ಆದೇಶದ ಮೇರೆಗೆ ಮುಂಬರುವ ಚುನಾವಣೆಯಲ್ಲಿ ಕಾಕ೯ಳ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯನ್ನು ನಿಲ್ಲಿಸಿ ಜನರ ಸಹಕಾರದಿಂದ ಅಧಿಕಾರ ನೀಡಿದರೆ ಜನಪರ ಆಡಳಿತಕ್ಕೆ ಅವಕಾಶ ಕಲ್ಪಿಸಿ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ಸುರೇಶ್ ದೇವಾಡಿಗ , ಹರೀಶ್ ಮೊದಲಾದವರು ಉಪಸ್ಥಿತರಿದ್ದರು