Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

‘ನಿಮ್ಮ ದುಡ್ಡು ಯಾರಿಗೆ ಬೇಕು, ನಮಗೆ ದುಡ್ಡಲ್ಲ ಶಾಂತಿ ಬೇಕು’: ಮಾಜಿ ಸಿಎಂ ಸಿದ್ದರಾಮಯ್ಯ ಕೊಟ್ಟ 2 ಲಕ್ಷ ರೂ. ಎಸೆದ ಮುಸ್ಲಿಂ ಮಹಿಳೆ

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ತಮ್ಮ ಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರಕ್ಕೆ ಇಂದು ಭೇಟಿ ನೀಡಿ ಕೆರೂರು ಪಟ್ಟಣ ಹಿಂಸಾಚಾರದಲ್ಲಿ ಗಾಯಗೊಂಡು ಸಂತ್ರಸ್ತರಾದವರ ಕುಟುಂಬಸ್ಥರಿಗೆ ಪರಿಹಾರ ನೀಡಲು ಹೋದ ವೇಳೆ ಮುಸ್ಲಿಂ ಜನಾಂಗದ ಮಹಿಳೆ ತರಾಟೆ ತೆಗೆದುಕೊಂಡು ಕೊಟ್ಟ 2 ಲಕ್ಷ ರೂಪಾಯಿ ಹಣವನ್ನು ಕಾರಿನತ್ತ ಎಸೆದ ಪ್ರಸಂಗ ನಡೆದಿದೆ.

ಮೊನ್ನೆ ಜುಲೈ 6ರಂದು ಹಿಂದೂ-ಮುಸ್ಲಿಮ್ ಕೋಮಿನ ಯುವಕರ ಮಧ್ಯೆ ಕ್ಷುಲ್ಲಕ ವಿಷಯಕ್ಕೆ ಯುವತಿಯರನ್ನು ಚುಡಾಯಿಸಿದ ಕಾರಣಕ್ಕೆ ಗಲಾಟೆ ಆರಂಭವಾಗಿ ಅದು ಘರ್ಷಣೆ ಹಿಂಸಾಚಾರಕ್ಕೆ ತಿರುಗಿ ಕೆರೂರು ಪಟ್ಟಣದಲ್ಲಿ ಸೆಕ್ಷನ್ 144 ಜಾರಿ ಮಾಡಿ ನಿಷೇಧಾಜ್ಞೆ ಹೇರಲಾಗಿತ್ತು.

ಘಟನೆಯಲ್ಲಿ ನಾಲ್ವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆ ನಂತರ ದುಷ್ಕರ್ಮಿಗಳು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಿದ್ದರಿಂದ ಹಲವು ವಾಹನಗಳು ಜಖಂಗೊಂಡಿದ್ದವು.

ಇಂದು ಕ್ಷೇತ್ರದ ಶಾಸಕರಾಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಗಾಯಗೊಂಡಿದ್ದ ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿ ಹಣ ನೀಡಲು ಹೋಗಿದ್ದರು. ಹಲ್ಲೆಯಲ್ಲಿ ಗಾಯಗೊಂಡಿದ್ದ ಹನೀಫ್, ರಫೀಕ್ ಸೇರಿದಂತೆ ನಾಲ್ವರಿಗೆ ಸಾಂತ್ವನ ಹೇಳಿ ತಲಾ 50 ಸಾವಿರ ರೂಪಾಯಿಗಳಂತೆ 2 ಲಕ್ಷ ರೂಪಾಯಿ ನೀಡಿದ್ದರು. ಆಗ ರಫೀಕ್ ಸೋದರಿ ರಜ್ಮಾ, ನಮಗೆ ದುಡ್ಡು ಬೇಡ, ನಾವು ಕಷ್ಟಪಟ್ಟು ಕೆಲಸ ಮಾಡಿ ಜೀವನ ನಡೆಸುತ್ತೇವೆ,. ನಮಗೆ ಶಾಂತಿ ಬೇಕು, ನಮ್ಮನ್ನು ನಮ್ಮ ಪಾಡಿಗೆ ಶಾಂತಿಯಿಂದ ಬದುಕಲು ಬಿಡಿ ಎಂದು ಹಣವನ್ನು ಕಾರಿನತ್ತ ಬಿಸಾಕಿದರು.

ಸಿದ್ದರಾಮಯ್ಯನವರು ಮರಳಿ ಹಣವನ್ನು ವಾಪಸ್ ಕೊಡಲು ಕಾರು ಹಿಂಬಾಲಿಸಿದ ಮಹಿಳೆಯನ್ನು ಸಿದ್ದರಾಮಯ್ಯ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಮಹಿಳೆಯರು ಸಮಾಧಾನಕ್ಕೆ ಬಗ್ಗಲಿಲ್ಲ. ಅಷ್ಟಕ್ಕೆ ಸುಮ್ಮನಾಗದ ಮಹಿಳೆ ಕಾರಿನ ಹಿಂದೆ ಹೋಗಿ ಹಣವನ್ನು ಎಸೆದಿದ್ದಾರೆ.

ಮಹಿಳೆ ಹೇಳುವುದೇನು?: ಘಟನೆ ನಡೆದು ಇಷ್ಟು ದಿನಗಳಾದ ಮೇಲೆ ಬರುತ್ತಿದ್ದಾರೆ, ಅವರ ದುಡ್ಡು ಯಾರಿಗೆ ಬೇಕು, ನಮ್ಮ ಕಷ್ಟ ಕೇಳುವವರು ಯಾರು ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯನವರು ಮಹಿಳೆಗೆ ಇದು ಸರ್ಕಾರದ ದುಡ್ಡಲ್ಲ, ನಾನು ವೈಯಕ್ತಿಕವಾಗಿ ಕೊಡುತ್ತಿದ್ದೇನೆ ಎಂದು ಹೇಳಿದರೂ ಮಹಿಳೆ ಕೇಳುವ ಸ್ಥಿತಿಯಲ್ಲಿರಲಿಲ್ಲ.

ಇಲ್ಲಿಯವರೆಗೂ ಯಾರು ಬಂದಿಲ್ಲ. ಈಗ ಸಿದ್ದರಾಮಯ್ಯ ಬಂದಿದ್ದಾರೆ. ವೋಟ್ ಕೇಳಬೇಕಾದ್ರೆ ಇವರಿಗೆ ಯಾವುದೇ ಜಾತಿ ಅಡ್ಡ ಬರುವುದಿಲ್ಲ. ನಿಮಗೆ ಕೈ ಮುಗಿತ್ತೀನಿ ವೋಟ್ ಹಾಕಿ ಎಂದು ಕೇಳಿಕೊಳ್ಳುತ್ತಾರೆ. ನಾವು ವೋಟ್ ಹಾಕಿದ್ರೆ ತಾನೇ ಅವರು ಅಧಿಕಾರಕ್ಕೆ ಬರುತ್ತಾರೆ. ನಮಗೂ ನ್ಯಾಯ ಬೇಕು, ಹಿಂದೂಗಳಿಗೂ ನ್ಯಾಯ ಬೇಕು. ಎಲ್ಲರೂ ಒಂದೇ ತಾಯಿ ಮಕ್ಕಳ ರೀತಿ ನಡೆದುಕೊಳ್ಳಬೇಕು ಎಂದು ಹೇಳಿದರು.

ನನಗೆ ಹೊಟ್ಟೆ ಹಸಿದಿದೆ ಎಂದು ಭಿಕ್ಷೆ ಬೇಡುದ್ರೆ ಹೊಟ್ಟೆ ತುಂಬ ರೊಟ್ಟಿ ಕೊಡುತ್ತಾರೆ. ಯಾರಾದ್ರೂ ಬಡಿತಾರೆ ಎಂದರೆ ಯಾರು ಯಾರಿಗೂ ಸಹಾಯ ಮಾಡುವುದಿಲ್ಲ. ನಮಗೆ ಆ ಕಷ್ಟ ಗೊತ್ತಿದೆ. ನಾವು ನಮ್ಮ ಮಕ್ಕಳ ಮುಖ ನೋಡಿ 8-10 ದಿನವಾಗಿದೆ ಎಂದು ಎಂದು ಅಳಲು ತೋಡಿಕೊಂಡರು.

ನಮಗೆ ಯಾರ ಪರಿಹಾರವೂ ಬೇಡ. ಈ ರೀತಿಯ ಗಲಭೆಗಳು ಮತ್ತೆ ನಡೆಯದಂತೆ ನೋಡಿಕೊಳ್ಳಬೇಕು. ನಮಗೆ ಬಂದ ಪರಿಸ್ಥಿತಿ ಯಾವ ಹಿಂದೂ, ಮುಸ್ಲಿಮರಿಗೂ ಬರಬಾರದು. ಒಂದು ವೇಳೆ ಈ ಘಟನೆಯಲ್ಲಿ ನಮ್ಮದು ತಪ್ಪು ಎಂದು ತಿಳಿದುಬಂದ್ರೆ, ಕುಟುಂಬ ಸಮೇತ ನಾವು ಪೊಲೀಸರಿಗೆ ಶರಣಾಗುತ್ತೇವೆ ಎಂದು ಸಹ ಹೇಳಿದರು.

ಇದಕ್ಕೂ ಮುನ್ನ ಆಸ್ಪತ್ರೆಯಲ್ಲಿರುವ ಗಾಯಾಳುಗಳ ಯೋಗಕ್ಷೇಮ ವಿಚಾರಿಸಲು ಸಿದ್ದರಾಮಯ್ಯನವರು ಹೋಗಿದ್ದಾಗ ಅಲ್ಲಿ ಕೂಡ ಗಾಯಾಳು ರೋಗಿಗಳು ಹಣ ಪಡೆಯಲು ನಿರಾಕರಿಸಿದರು. ನಮಗೆ ಹಣ ಬೇಡ, ನೆಮ್ಮದಿ ಬೇಕು, ಬದುಕು ಬೇಕು ಎಂದು ಅಳಲು ತೋಡಿಕೊಂಡರು. ಕೊನೆಗೆ ಸಿದ್ದರಾಮಯ್ಯನವರು ಅವರನ್ನು ಸಮಾಧಾನಪಡಿಸಿದರು.

No Comments

Leave A Comment